ಉಡುಪಿ ಮಾ.17: ಕರ್ನಾಟಕ ರಾಜ್ಯ ಸರ್ಕಾರವು ಉಡುಪಿ ಜಿಲ್ಲೆಯಲ್ಲಿ ನಡೆಸುತ್ತಿರುವ ಆಂಗ್ಲ ಮಾಧ್ಯಮದ ಮೊರಾರ್ಜಿ ದೇಸಾಯಿ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳ ಆರನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 3 ಕೊನೆಯ ದಿನವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರ, ನಿಲಯ ಪಾಲಕರ, ಕಂಪ್ಯೂಟರ್ ಶಿಕ್ಷಕರ ಮತ್ತು ಪ್ರಥಮ ದರ್ಜೆ ಸಹಾಯಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೆರಂಜಾಲು, ಕಾರ್ಕಳ ತಾಲೂಕಿನ ಮಿಯಾರು, ಬ್ರಹ್ಮಾವರ ತಾಲೂಕಿನ ಆರೂರು, ಕುಂದಾಪುರ ತಾಲೂಕಿನ ಕೋಟೇಶ್ವರ, ಸಿದ್ಧಾಪುರ, ಶಂಕರನಾರಾಯಣ, ಉಡುಪಿ ತಾಲೂಕಿನ ಹಿರೇಬೆಟ್ಟು ಹಾಗೂ ಕಾಪು ತಾಲೂಕಿನ ಕಳತ್ತೂರು ವಸತಿ ಶಾಲೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸದಾಶಿವ ಪ್ರಭು ತಿಳಿಸಿದರು.
ಉಡುಪಿ ಜಿಲ್ಲೆಯ 5 ನೇ ತರಗತಿಯ ವಿದ್ಯಾರ್ಥಿಗಳು ಈ ವಸತಿ ಶಾಲೆಗಳ ಪ್ರಯೋಜನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ವ್ಯಾಪಕ ಪ್ರಚಾರ ನೀಡುವಂತೆ ಹಾಗೂ ಉತ್ತಮ ವಸತಿ ವ್ಯವಸ್ಥೆ ಇರುವ ಈ ಶಾಲೆಗಳಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವಂತಾಗಲು ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದ ಎಡಿಸಿ, ಸಾಮಾಜಿಕ ಜಾಲತಾಣಗಳ ಮುಖಾಂತರ ಪ್ರವೇಶ ಪರೀಕ್ಷೆಯ ಕುರಿತು ಹೆಚ್ಚಿನ ಪ್ರಚಾರವನ್ನು ಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರವೇಶ ಪರೀಕ್ಷಾ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ್ ಎಸ್.ಎನ್, ಶಿಕ್ಷಣ ಇಲಾಖೆಯ ಡಿಡಿಪಿಐ ಶೇಷಶಯನ ಕಾರಿಂಜ, ಐಟಿಡಿಪಿ ಇಲಾಖೆಯ ಅಧೀಕ್ಷಕ ವಿಶ್ವನಾಥ ಶೆಟ್ಟಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.












