ಉಡುಪಿ: ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹಾಗೂ ಅವರ ಶಿಷ್ಯ, ಮಠದ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಅವರು ಶುಕ್ರವಾರ ಬಾಳೆ ಮುಹೂರ್ತ ನೆರವೇರಿಸುವ ಮೂಲಕ 2020, ಜನವರಿ 18ರಿಂದ ಆರಂಭವಾಗಲಿರುವ ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಿದರು.
ಮಠದ ಪುರೋಹಿತರಾದ ಶಿಬರೂರು ವಾಸುದೇವ ತಂತ್ರಿ ನೇತೃತ್ವದಲ್ಲಿ ಬಾಳೆ ಮುಹೂರ್ತದ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೊದಲಿಗೆ ಚಂದ್ರಮೌಳೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಅದಮಾರು ಮಠದಿಂದ ಬಾಳೆ ಗಿಡ, ತುಳಸಿ ಗಿಡ ಮತ್ತು ಕಬ್ಬಿನ ಜಲ್ಲೆಯನ್ನು ಮೆರವಣಿಗೆ ಮೂಲಕ ತರಲಾಯಿತು.
ಅಷ್ಟ ಮಠಗಳ 32ನೇ ಆವೃತ್ತಿಯ ಪರ್ಯಾಯದಲ್ಲಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಅವರು ಪರ್ಯಾಯ ಪೀಠ ಏರುತ್ತಿರುವುದು ಇದು ಮೂರನೇ ಬಾರಿ.
108 ಬಾಳೆಗಿಡಗಳ ನಾಟಿ:
ಉಡುಪಿ ಕೃಷ್ಣಮಠದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಾಳೆ ಮುಹೂರ್ತ ಸಂದರ್ಭದಲ್ಲಿಯೇ 108 ಬಾಳೆ ಕಂದುಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ಸಿಕ್ಕಿತು. ಈ ಹಿಂದೆ ಪರ್ಯಾಯ ನಡೆಯುವ ಮಠದ ಆವರಣದಲ್ಲಿ ಸಾಂಕೇತಿಕವಾಗಿ ಒಂದು ಬಾಳೆಗಿಡ ನೆಡಲಾಗುತ್ತಿತ್ತು. ಆದರೆ ಈ ಬಾರಿ ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಅವರು, ಪರ್ಯಾಯದ ಅವಧಿಯಲ್ಲಿ ಬೇಕಾಗುವ ಬಾಳೆ ಎಲೆ, ಬಾಳೆ ಗೊನೆಯನ್ನು ಮಠದ ಆವರಣದಲ್ಲಿರುವ ಜಾಗ, ಮೂಲ ಮಠ ಹಾಗೂ ಶಾಖಾ ಮಠದಲ್ಲಿ ಬೆಳೆಯಲು ಉದ್ದೇಶಿಸಿದ್ದಾರೆ.
ಪರ್ಯಾಯ ಪೂರ್ವ ಸಿದ್ಧತೆಯ ಎರಡನೇ ಕಾರ್ಯಕ್ರಮವಾಗಿ ಜ.30ರಂದು ಅಕ್ಕಿ ಮುಹೂರ್ತ ನಡೆಯಲಿದೆ. ಆ ಬಳಿಕ ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತ ನಡೆಯಲಿದೆ.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ ರತ್ನಾಕರ ಹೆಗ್ಡೆ, ಯಶ್ ಪಾಲ್ ಸುವರ್ಣ, ಗೀತಾಂಜಲಿ ಸುವರ್ಣ, ಸುಕುಮಾರ್ ಶೆಟ್ಟಿ, ದಿನೇಶ್ ಪುತ್ರನ್, ಧರ್ಮದರ್ಶಿ ಹರಿಕೃಷ್ಣ ಪುನರೂರು ಮೊದಲಾದವರು ಉಪಸ್ಥಿತರಿದ್ದರು.