ಉಡುಪಿ: ಕೇರಳ ಹಾಗೂ ಮಹಾರಾಷ್ಟ್ರದ ಭಕ್ತರನ್ನು ಗುರುತಿಸುವ ಸಲುವಾಗಿ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಸ್ಪಿಬಿ ಮಹೇಶ್ ತಿಳಿಸಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಭಕ್ತರು ಕಡ್ಡಾಯವಾಗಿ 72 ಗಂಟೆ ಮೀರದ ಕೋವಿಡ್ ಆರ್ಟಿಪಿಸಿಆರ್ ನೆಗೆಟಿವ್ ವರದಿ ಸಲ್ಲಿಸಬೇಕು. ವರದಿ ಇಲ್ಲದ ಭಕ್ತರಿಗೆ ಸ್ಥಳದಲ್ಲೇ ಕೋವಿಡ್ ಪರೀಕ್ಷೆಗೊಳಪಡಿಸಿ, 7 ದಿನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುವುದು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ಇದ್ದರೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ದೇವಸ್ಥಾನದ ಸಮೀಪದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಹಾಗೂ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದ್ದು, ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಹೇಶ್ ತಿಳಿಸಿದರು.