ಉಡುಪಿ: ಪೊಲೀಸರೆಂದು ನಂಬಿಸಿ ಮಹಿಳೆಯ ಚಿನ್ನದ ಸರ, ಬಳೆ ಲಪಟಾಯಿಸಿದ ವಂಚಕರು

ಉಡುಪಿ: ಪೊಲೀಸರೆಂದು ಹೇಳಿ ಮನೆ ಕೆಲಸ ಮುಗಿಸಿಕೊಂಡು ತೆರಳುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ₹40 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಎರಡು ಚಿನ್ನದ ಬಳೆಗಳನ್ನು ಲಪಟಾಯಿಸಿದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ನಡೆದಿದೆ.

ಅಂಬಲಪಾಡಿ ನಿವಾಸಿ ವಸಂತಿ ಎಂಬಾಕೆ ವಂಚನೆಗೊಳಗಾದ ಮಹಿಳೆ. ಇವರು ಭಾನುವಾರ ಪ್ಲಾಟ್‌ವೊಂದರಲ್ಲಿ ಮನೆ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು.

ಶ್ಯಾಮಿಲಿ ಹಾಲ್‌ನ ವಾಹನ ಪಾರ್ಕಿಂಗ್ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಇಬ್ಬರು ಅಪರಿಚಿತರು ಬೈಕ್ ನಿಲ್ಲಿಸಿ ನಿಂತುಕೊಂಡಿದ್ದು, ವಸಂತಿಯವರನ್ನು ತಡೆದು ‘ನಾವು ಪೊಲೀಸ್‌ನವರು ಮುಂದೆ ಯಾರೋ ಹೆಂಗಸಿಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ನಿಮ್ಮಲ್ಲಿರುವ ಚಿನ್ನಾಭರಣಗಳನ್ನು ತೆಗೆದು ಕೊಡಿ ಪೇಪರ್‌ನಲ್ಲಿ ಕಟ್ಟಿಕೊಡುತ್ತೇವೆ’ ಎಂದು ನಂಬಿಸಿದರು.

ವಂಚಕರ ಮಾತು ಕೇಳಿದ ವಸಂತಿ ತಮ್ಮ ಬಳಿಯಲ್ಲಿ ಇದ್ದ ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್‌ 2 ಚಿನ್ನದ ಬಳೆಗಳನ್ನು ತೆಗೆದುಕೊಟ್ಟರು. ಬಳಿಕ ವಂಚಕರು ಅದನ್ನು ಪೇಪರ್‌ನಲ್ಲಿ ಸುತ್ತಿ ವಾಪಾಸ್ ಕೊಟ್ಟರು. ಸ್ವಲ್ಪ ದೂರ ಹೋದ ಮೇಲೆ ಸಂಶಯಗೊಂಡ ವಸಂತಿ ಪೇಪರ್ ಕಟ್ಟನ್ನು ಬಿಚ್ಚಿನೋಡಿದ್ದಾರೆ. ಆಗ ಅದರಲ್ಲಿ ಐದು ನಕಲಿ ಬಳೆಗಳಿದ್ದವು. ಆಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಅವರು, ಈ ಬಗ್ಗೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.