ಉಡುಪಿ: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಉಡುಪಿ: ಅಕೇಶಿಯಾ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಇರ್ಮಾಡಿ ಶೇಡಿಗುಳಿ ಎಂಬಲ್ಲಿನ ವನ್ಯಜೀವಿ ಮೀಸಲು ಅರಣ್ಯದಲ್ಲಿ ಸಂಭವಿಸಿದೆ.

ಉಡುಪಿ ಅಂಬಲಪಾಡಿಯ ನಿವಾಸಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಪದ್ಮನಾಭ ಭಂಡಾರಿ (66) ಎಂಬುವವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಇವರು ಹೃದಯ ಸಂಬಂಧಿ ಮತ್ತು ಮೂತ್ರಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೃದಯದ ಬೈಪಾಸ್ ಸರ್ಜರಿ ಹಾಗೂ ಮೂತ್ರಾಂಗಕ್ಕೆ ಟ್ಯೂಬ್ ಅಳವಡಿಸಿರುವುದರಿಂದ ತುಂಬಾ ಚಿಂತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇದೇ ಚಿಂತೆಯಿಂದ ಮನನೊಂದು ಫೆ. 17ರ ಬೆಳಿಗ್ಗೆ ಬೆಳಿಗ್ಗೆ 11:45 ಗಂಟೆಯಿಂದ ಫೆ. 18ರ ಬೆಳಿಗ್ಗೆ 7:30ರ ಮಧ್ಯೆ ತನ್ನ ಕಾರನ್ನು ಚಲಾಯಿಸಿಕೊಂಡು ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಇರ್ಮಾಡಿ ಶೇಡಿಗುಳಿ ಎಂಬಲ್ಲಿಗೆ ಹೋಗಿದ್ದು, ರಸ್ತೆ ಬದಿ ಕಾರು ನಿಲ್ಲಿಸಿ ಕಾಡಿನೊಳಗೆ ಹೋಗಿ ಅಕೇಶಿಯಾ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.