ಉಡುಪಿ: ಆಸ್ತಿ ವಿಚಾರಕ್ಕಾಗಿ ಯೋಧನ ಪತ್ನಿಯ ಕೊಲೆಗೆ ಯತ್ನ; ದೂರು ದಾಖಲು

ಉಡುಪಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕತ್ತಿಯಿಂದ ಕಡಿದು ಯೋಧನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಉಡುಪಿ ತಾಲೂಕಿನ ಪರ್ಕಳ ಹೆರ್ಗದ ಗರಡಿ ಬಳಿ ನಡೆದಿದೆ.

ಪರ್ಕಳ ಹೆರ್ಗದ ಗರಡಿ ಬಳಿ ನಿವಾಸಿ 28 ವರ್ಷದ ದೀಪಾ ನಾಯಕ್ ಅವರ ಮೇಲೆ ಕೊಲೆಯತ್ನ ನಡೆದಿದೆ ಎನ್ನಲಾಗಿದೆ. ಸೋದರ ಮಾವ ಜಗದೀಶ್‌ ನಾಯಕ್‌ ಎಂಬಾತ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಆರೋಪಿ.

ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ದೀಪಾ ನಾಯಕ್  ಅವರು ಮನೆಯ ಹೊರಗೆ ನಿಂತು ಜಾಗದ ಸರ್ವೆ ಕಾರ್ಯವನ್ನು‌ ನೋಡುತ್ತಿದ್ದರು. ಈ ವೇಳೆ ಆರೋಪಿ ಜಗದೀಶ್‌ ನಾಯಕ್‌ ಆಸ್ತಿ ವಿಚಾರದ ಪೂರ್ವ ದ್ವೇಷದಿಂದ ದೀಪಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕತ್ತಿಯಿಂದ ತಲೆಯ ಹಿಂಬದಿಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ ಎಂದು ದೀಪಾ ದೂರಿನಲ್ಲಿ ತಿಳಿಸಿದ್ದಾರೆ. ಈ‌ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾ ಅವರ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.