ಉಡುಪಿ: ಪ್ರೇಯಸಿಗೆ ಚೂರಿಯಿಂದ ಇರಿದು ಕೊಲೆಗೈದಿದ್ದ ಪ್ರಿಯಕರ ಸಾವು

ಉಡುಪಿ: ಪ್ರೇಯಸಿಗೆ ಚೂರಿಯಿಂದ ಇರಿದು ಕೊಲೆಗೈದು ಬಳಿಕ ಅದೇ ಚೂರಿಯಿಂದ ಕತ್ತು ಕೊಯ್ದುಕೊಂಡಿದ್ದ ಪ್ರಿಯಕರ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೃತ ಆರೋಪಿ ಪ್ರಿಯಕರನನ್ನು ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಐಡಿಯಲ್ ಮೆಡಿಕಲ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಈತ ನಿನ್ನೆ ಮೃತಪಟ್ಟ ಸೌಮಶ್ರೀಯನ್ನು ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದನು ಎನ್ನಲಾಗಿದೆ.

ಆದರೆ ಆಕೆಗೆ ಕೆಲ ದಿನಗಳ ಹಿಂದೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ರೊಚ್ಚಿಗೆದ್ದ ಸಂದೇಶ್ ನಿನ್ನೆ ಸಂಜೆ ಉಡುಪಿ ಸಂತೆಕಟ್ಟೆ ಸಮೀಪದ ರೋಬೊ ಸಾಪ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮನೆಗೆ ಹೋಗುತ್ತಿದ್ದ ಪ್ರೇಯಸಿ ಸೌಮ್ಯಶ್ರೀಯನ್ನು ತಡೆದು ನಿಲ್ಲಿಸಿದ್ದನು. ಆಗ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸಂದೇಶ್ ಕುಲಾಲ್, ತಾನು ತಂದಿದ್ದ ಚೂರಿಯಿಂದ ಸೌಮ್ಯಶ್ರೀಗೆ ಇರಿದ ಎನ್ನಲಾಗಿದೆ. ನಂತರ ಅದೇ ಚಾಕುವಿನಿಂದ ಆತ ತನ್ನ ಕುತ್ತಿಗೆ ಕೊಯ್ದುಕೊಂಡನು.

ತಕ್ಷಣ ಸ್ಥಳೀಯರು ಧಾವಿಸಿ ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಸೌಮ್ಯಶ್ರೀ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಂದೇಶ್ ಕುಲಾಲ್ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.