ಉಡುಪಿ: ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನಿಂದ 26 ನಾಟಿಕಲ್ ಮೈಲು ದೂರದಲ್ಲಿ ಸಂಭವಿಸಿದೆ.
ಕಲ್ಯಾಣಪುರ ನಿವಾಸಿ ವಿಶ್ವನಾಥ್ (48) ಮೃತ ದುರ್ದೈವಿ. ಇವರು ಫೆ. 16ರಂದು ಸಂಜೆ ಮಲ್ಪೆ ಬಂದರಿನಿಂದ ಮಹಾಬಲೇಶ್ವರ ಬೋಟ್ ನಲ್ಲಿ ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.
ಫೆ.17ರಂದು ಬೆಳಿಗ್ಗೆ 4.15 ಸುಮಾರಿಗೆ ಮಲ್ಪೆ ಬಂದರಿನಿಂದ 26 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ದೈತ್ಯಾಕಾರದ ಅಲೆ ಬಡಿದು ಬೋಟ್ ಮಗುಚಿದ್ದು, ಈ ವೇಳೆ ಬೋಟ್ ನಲ್ಲಿದ್ದ ವಿಶ್ವನಾಥ್ ಸಮುದ್ರಕ್ಕೆ ಬಿದ್ದಿದ್ದರು. ಬೋಟ್ ನಲ್ಲಿದ್ದ ಇತರ ಮೀನುಗಾರರು ಹುಡುಕಾಟ ನಡೆಸಿದರೂ ವಿಶ್ವನಾಥ್ ಪತ್ತೆಯಾಗಿರಲಿಲ್ಲ.
ಫೆ. 19ರ ಸಂಜೆ 4.30 ಗಂಟೆಗೆ ವಿಶ್ವನಾಥ್ ಸಮುದ್ರದ ನೀರಿಗೆ ಬಿದ್ದ ಸ್ವಲ್ಪ ದೂರದಲ್ಲಿ ಮೃತದೇಹವೊಂದು ತೇಲುತ್ತಿದ್ದು, ಅದನ್ನು ಪರಿಶೀಲಿಸಿದಾಗ ವಿಶ್ವನಾಥ ಮೃತದೇಹವೆಂದು ಗುರುತಿಸಲಾಗಿದೆ. ಅದೇ ಬೋಟ್ ನಲ್ಲಿ ಮೃತದೇಹವನ್ನು ತಂದು ಉಡುಪಿ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.