ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿ: ಮುಂಬೈನಿಂದ ಆಗಮಿಸಿದ್ದ 54 ವರ್ಷದ ವ್ಯಕ್ತಿ ಮಣಿಪಾಲ ಕೆಎಂಸಿಯಲ್ಲಿ ಸಾವು

ಉಡುಪಿ: ಕ್ವಾರಂಟೈನ್ ನಲ್ಲಿ ಇದ್ದ 54 ವರ್ಷದ ವ್ಯಕ್ತಿ ಮೇ 14ರಂದು ಮೃತಪಟ್ಟಿದ್ದು, ಇಂದು ಬಂದ ಕೊರೊನಾ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.‌ ಜಗದೀಶ್ ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ಮೃತ ವ್ಯಕ್ತಿ ಮುಂಬೈನಿಂದ ಕುಂದಾಪುರಕ್ಕೆ ಆಗಮಿಸಿದ್ದು, ಇವರನ್ನು ಕುಂದಾಪುರದ ಕಲ್ಯಾಣ ಮಂಟಪವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 13ರಂದು ವ್ಯಕ್ತಿಗೆ ಹೃದಯಾಘಾತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲಿಗೆ ಕುಂದಾಪುರದ ಆಸ್ಪತ್ರೆಗೆ ಹಾಗೂ ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೇ 14ರಂದು ವ್ಯಕ್ತಿ ನಿಧನರಾಗಿದ್ದರು. ಮೃತ ವ್ಯಕ್ತಿ ಮುಂಬೈನಿಂದ ಆಗಮಿಸಿದ್ದರಿಂದ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು, ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ವ್ಯಕ್ತಿಗೆ ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಕುಂದಾಪುರ ಕಲ್ಯಾಣಮಂಟದ ಕ್ವಾರಂಟೈನ್ ಹಾಗೂ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಸಂಪರ್ಕಕ್ಕೆ 57 ಮಂದಿ ಮತ್ತು ದ್ವಿತೀಯ ಸಂಪರ್ಕಿತ 38 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮೃತನ ಅಂತ್ಯ ಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿಯಂತೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ