Home Trending ಉಡುಪಿ: ಕೊರೊನಾದಿಂದ ಗುಣಮುಖರಾದ 18 ಮಕ್ಕಳು ಸಹಿತ 45 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಕೊರೊನಾದಿಂದ ಗುಣಮುಖರಾದ 18 ಮಕ್ಕಳು ಸಹಿತ 45 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 18 ಮಕ್ಕಳು ಸಹಿತ ಒಟ್ಟು 45 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು  ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಬಹುತೇಕರು ಮುಂಬೈ ಹಾಗೂ ದುಬೈನಿಂದ ಬಂದವರಾಗಿದ್ದಾರೆ.  ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದ ಒಂದು ವರ್ಷದ ಮಗು ಸೇರಿದಂತೆ 18 ಮಕ್ಕಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಚಾಕಲೇಟ್, ವಿಶೇಷ ಉಡುಗೊರೆ ನೀಡಿ ಬೀಳ್ಕೊಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 164 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅದರಲ್ಲಿ 50 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ ಕುಂದಾಪುರ ಆಸ್ಪತ್ರೆಯಲ್ಲಿ ಬಹುತೇಕರು ಗುಣಮುಖರಾಗಿದ್ದು, ಅವರು ಮೇ 31ರಂದು ಬಿಡುಗಡೆಯಾಗಲಿದ್ದಾರೆ ಎಂದರು.
ಕೊರೊನಾ ಯುದ್ಧ ಗೆದ್ದು ಬಂದವರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಹಾಗೂ ಅವರಿಗೆ ಶುಭಾಕೋರುವ ನಿಟ್ಟಿನಲ್ಲಿ ಈ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಡಿಎಚ್ ಒ ಸುಧೀರ್ ಚಂದ್ರ ಸೂಡಾ, ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ. ಶಶಿ ಕಿರಣ್ ಹಾಜರಿದ್ದರು.
error: Content is protected !!