ಉಡುಪಿ: 21 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ.

ಉಡುಪಿ: ಶಂಕರನಾರಾಯಣ ಠಾಣಾ(ಈಗಿನ ಅಮಾಸೆಬೈಲು ಠಾಣೆ) ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 21ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಪುತ್ತೂರು ಮೆಗ್ರಾಲು ನಿವಾಸಿ ಫಾರೂಕ್ ಬಂಧಿತ ಆರೋಪಿ. ಈತ ವಿರುದ್ಧ 2004ರ ಡಿ.25ರಂದು ಪ್ರಕರಣ ದಾಖ ಲಾಗಿದ್ದು, ಅಂದಿನಿಂದ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆ ಹಿನ್ನೆಲೆಯಲ್ಲಿ ಆತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಲಾಗಿತ್ತು. ಈತನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತಂಡವು ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಜು.28ರಂದು ಆರೋಪಿಯನ್ನು ರಾಮನಗರ ಜಿಲ್ಲೆ ಮಾಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜು.29ರಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು.

ಈ ಕಾರ್ಯಾಚಣೆಯಲ್ಲಿ ಅಮಾಸೆಬೈಲು ಎಸ್ಸೈ ಅಶೋಕ್ ಕುಮಾರ್ ಹಾಗೂ ಸಿಬ್ಬಂದಿ ರಾಘವೇಂದ್ರ, ಪರಮೇಶಪ್ಪ ಹೆಬಸೂರು, ಸುಧಾಕರ್, ದರ್ಶನ್, ಮಲ್ಲೇಶ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ದಿನೇಶ್ ಪಾಲ್ಗೊಂಡಿದ್ದರು.