ಉಡುಪಿ: ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಇವರ ಸಹಸಂಸ್ಥೆ ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪಾರಾಮೆಡಿಕಲ್ ಸೈನ್ಸಸ್ ಇದರ ಘಟಿಕೋತ್ಸವ ಹಾಗೂ ನೂತನ ಸ್ನಾತಕೋತ್ತರ ಪದವಿ ಸೆಂಟರ್ ಉದ್ಘಾಟನಾ ಕಾರ್ಯಕ್ರಮ ಫೆ. 13ರಂದು ಕಿನ್ನಿಮೂಲ್ಕಿ ವೇಗಾಸ್ ಟೌನ್‌ಶಿಪ್‌ನಲ್ಲಿರುವ ಕಾಲೇಜು ಆವರಣದಲ್ಲಿ ನಡೆಯಲಿದೆ.
2016 ರಲ್ಲಿ ಆರಂಭವಾದ ಈ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್ಸಿ ಓಪ್ಪಮೆಟ್ರಿ, ಅನಸ್ತೇಶಿಯಾ ಮತ್ತು ಅಪರೇಷನ್ ಥಿಯೇಟರ್ ಟೆಕ್ನಾಲಜಿ,ಬಿ ಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್, ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, “ಬ್ಯಾಚುಲರ್ ಇನ್ ಫಿಸಿಯೋಥೆರಪಿ ಪದವಿ ಕೋರ್ಸ್ ಹಾಗೂ ಡಿಪ್ಲೊಮಾ ಕೋರ್ಸ್ ಗಳಾದ ಆಪ್ಥಾಲ್ಮಿಕ್ ಟೆಕ್ನಾಲಜಿ, ಅನಸ್ತೇಶಿಯಾ ಮತ್ತು ಅಪರೇಷನ್ ಥಿಯೇಟರ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ, ಹೆಲ್ ಇನ್ಸ್ಪೆಕ್ಟರ್ ಟೆಕ್ನಾಲಜಿ ವಿಷಯಗಳಲ್ಲಿ ಡಿಪ್ಲೋಮಾ ಪದವಿ ಪಡೆಯಬಹುದು. ಕಳೆದ 8 ವರ್ಷಗಳಿಂದ ಶೈಕ್ಷಣಿಕ ಫಲಿತಾಂಶಗಳಲ್ಲಿ ನಿರಂತರ ಅತ್ಯುತ್ತಮ ಫಲಿತಾಂಶಗಳನ್ನು ಹೊಂದಿರುವ ಈ ಸಂಸ್ಥೆ ರಾಜ್ಯದಲ್ಲಿಯೇ ಅತಿ ಹೆಚ್ಚಿನ ರ್‍ಯಾಂಕ್ ಪಡೆದಿರುವ ಹೆಗ್ಗಳಿಕೆ ಹೊಂದಿದೆ.ಕಳೆದ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ನಡೆಯಲಿದೆ.
ಸಂಸ್ಥೆಯು ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗದಲ್ಲಿ ಇನ್ನೂ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಹೊಸ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಅರಂಭಿಸುತ್ತಿದ್ದು, ಸ್ನಾತಕೋತ್ತರ ಪದವಿ ಸೆಂಟರನ್ನು ಆರಂಭಿಸುತ್ತಿದೆ. ಮಾಸ್ಟರ್ಸ್ ಇನ್ ಪಬ್ಲಿಕ್ ಹೆಲ್ತ್, ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಅಲ್ಲದೇ ಎಂ. ಎಸ್ಸಿ, ಎಂ ಎಲ್ಟಿ (ಕ್ಲಿನಿಕಲ್ ಬಯೋಕೆಮಿಸ್ಟ್ರಿ), ಎಂ. ಎಸ್ಸಿ, ಎಂ ಎಲ್ಟಿ (ಮೈಕ್ರೋಬಯಾಲಜಿ ಆಂಡ್ ಇಮ್ಯುನಾಲಜಿ) ಎಂ. ಎಸ್ಸಿ. ಎಂ ಎಲ್ಟಿ(ಹೆಮಾಟಾಲಜಿ ಆಂಡ್ ಬ್ಲಿಡ್ ಟ್ರಾನ್ಸ್‌ಪ್ಯೂಜನ್) ಮುಂತಾದ ಕೋರ್ಸುಗಳು ಆರಂಭಗೊಳ್ಳುತ್ತಿದೆ. ಎಲ್ಲಾ ಪಿಜಿ ಕೋರ್ಸ್ ಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಇದರ ಅಡಿಯಲ್ಲಿ ಮಾನ್ಯತೆ ಪಡೆದಿದೆ.
ಈ ಘಟಿಕೋತ್ಸವದಲ್ಲಿ ಗೋವಾ ಮುಖ್ಯಮಂತ್ರಿ ಡಾ “ಪ್ರಮೋದ್ ಸಾವಂತ್‌ರವರು ಗಣ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ ಮತ್ತು ಹೊಸ ಪಿ.ಜಿ. ಸೆಂಟರನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಹೆ ಮಣಿಪಾಲದ ಪ್ರೊ ಚಾನ್ಸಲರ್ ಪ್ರೊಫೆಸರ್ ಹೆಚ್ಎಸ್ ಬಲ್ಲಾಳ್ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಹಾಗೂ ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ನ ಚೇರ್ಮನ್ ಡಾ| ಯು.ಟಿ ಇಫ್ತಿಕರ್ ಅಲಿ ಭಾಗವಹಿಸಲಿದ್ದಾರೆ.












