ಮುಂಬಯಿ: ಶಿವಸೇನೆ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಪಕ್ಷದ ಶಾಸಕರು ಒತ್ತಾಯಿಸಿದರೆ ಶಿವಸೇನಾ ಮುಖ್ಯಸ್ಥ ಸ್ಥಾನದಿಂದ ಮತ್ತು ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ.
“ಶಾಸಕರಿಗೆ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ, ಅವರು ಇಲ್ಲಿಗೆ ಬಂದು ನನ್ನ ರಾಜೀನಾಮೆಯನ್ನು ರಾಜಭವನಕ್ಕೆ ತೆಗೆದುಕೊಂಡು ಹೋಗಬೇಕು. ನಾನು ಶಿವಸೇನೆ ಪಕ್ಷದ ಮುಖ್ಯಸ್ಥನ ಸ್ಥಾನವನ್ನು ಸಹ ಬಿಡಲು ಸಿದ್ಧನಿದ್ದೇನೆ, ಆದರೆ ನನ್ನ ಕಾರ್ಯಕರ್ತರ ಮಾತಿಗಾಗಿ ಅಲ್ಲ”, ಎನ್ನುವ ವಿಡಿಯೋ ವನ್ನು ಉಲ್ಲೇಖಿಸಿ ಎ ಎನ್ ಐ ವರದಿ ಮಾಡಿದೆ.
ಏಕನಾಥ ಶಿಂದೆ ನೇತೃತ್ವದಲ್ಲಿ ಬಂಡಾಯ ಶಾಸಕರು ಗುವಾಹಾಟಿಯ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ತಂಗಿದ್ದು, ಉದ್ದವ್ ಠಾಕ್ರೆ ಸರಕಾರದ ಬಹುಮತ ಕುಸಿದಿರುವ ಕಾರಣ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುವ ಅನಿವಾರ್ಯತೆಗೆ ಉದ್ದವ್ ಸಿಲುಕಿದ್ದಾರೆ. ಈ ಮಧ್ಯೆ ತನ್ನ ರಾಜೀನಾಮೆ ಪತ್ರ ತಯಾರಾಗಿದೆ ಎಂದಿರುವ ಉದ್ದವ್, ತಮ್ಮ ಸರಕಾರಿ ಬಂಗಲೆಯನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.