ಉದಯನಿಧಿ ಹೇಳಿಕೆಯಿಂದ ಐ.ಎನ್.ಡಿ.ಐ.ಎ ಒಕ್ಕೂಟದ ಹಿಂದೂ ವಿರೋಧಿ ನೀತಿಯ ಅನಾವರಣ: ಯಶ್ ಪಾಲ್ ಸುವರ್ಣ

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಭಾರತದ ಸಾಮಾಜಿಕ ವ್ಯವಸ್ಥೆಯ ಹೆಮ್ಮೆಯ ಪ್ರತೀಕವಾದ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಮಸ್ತ ಹಿಂದೂ ಸಮಾಜಕ್ಕೆ ಅವಮಾನಿಸುವ ಮೂಲಕ ಐ.ಎನ್.ಡಿ.ಐ.ಎ ವಿಪಕ್ಷಗಳ ಒಕ್ಕೂಟದ ಹಿಂದೂ ವಿರೋಧಿ ನಿಲುವನ್ನು ಬಹಿರಂಗಪಡಿಸಿದ್ದಾರೆ. ತನ್ನ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ನಿರ್ದಿಷ್ಟ ಸಮುದಾಯದ ಓಲೈಕೆಗಾಗಿ ಹಿಂದೂ ದ್ವೇಷಿ ಹೇಳಿಕೆಯ ಮೂಲಕ ಸ್ಟಾಲಿನ್ ಸನಾತನ ಧರ್ಮವನ್ನು ಅಪಮಾನಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಿಡಿ ಕಾರಿದ್ದಾರೆ.

ಈ ಹಿಂದೆ ಬ್ರಿಟಿಷರು ಮತ್ತು ಮತಾಂಧ ರಾಜರು ಮತಾಂತರ, ದಬ್ಬಾಳಿಕೆಯ ಮೂಲಕ ಸನಾತನ ಧರ್ಮದ ನಿರ್ಮೂಲನೆಗೆ ವಿಫಲ ಪ್ರಯತ್ನಕ್ಕೆ ಮುಂದಾಗಿದ್ದರು. ಇದೀಗ ಅದೇ ಮನಸ್ಥಿತಿಯಲ್ಲಿ ಉದಯ ನಿಧಿ ಈ ಹೇಳಿಕೆಯ ಮೂಲಕ ಹಿಂದೂ ದ್ವೇಷಿ ವಂಶದ ಪರಂಪರೆಯನ್ನು ಮುಂದುವರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸನಾತನ ಧರ್ಮ ಕೇವಲ ಒಂದು ಧರ್ಮವಾಗಿರದೇ ಭಾರತದ ಜನರ ಜೀವನ ಪದ್ಧತಿಯಾಗಿದೆ. ಓರ್ವ ಸಚಿವನಾಗಿ, ಕೇವಲ ಅಲ್ಪಸಂಖ್ಯಾತರ ಓಲೈಕೆ, ಮತಾಂತರ ಸಂಸ್ಥೆಗಳ ಹಿಡನ್ ಅಜೆಂಡಾದ ಟೂಲ್ ಕಿಟ್ ಭಾಗವಾಗಿ ಉದಯನಿಧಿಯವರು ಬಹುಸಂಖ್ಯಾತ ಹಿಂದೂ ದ್ವೇಷಿ ನಿಲುವನ್ನು ಹೊಂದಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಅವರು ಹೇಳಿದ್ದಾರೆ.