ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣ: ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ

ಬಾಲಚಂದ್ರ ಭಟ್

ಉಡುಪಿ: ಯಡಮೊಗೆ ಗ್ರಾಪಂ ವ್ಯಾಪ್ತಿಯ ಹೊಸಬಾಳು ಉದಯ ಕುಮಾರ್ ಗಾಣಿಗ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಅಗ್ರಹಾರ ಹಾಗೂ ಯಡಮೊಗೆ ನಿವಾಸಿ ರಾಜೇಶ್ ಭಟ್ ಎಂದು ಗುರುತಿಸಲಾಗಿದೆ. ರಾಜೇಶ್ ಭಟ್ ಈ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಬಾಲಚಂದ್ರ ಭಟ್ ಅಗ್ರಹಾರ ಕೊಲೆಗೆ ಕುಮ್ಮಕ್ಕು ನೀಡಿರುವುದಾಗಿ ಎನ್ನಲಾಗಿದೆ. ಈ ಬಗ್ಗೆ ಮೃತರ ಪತ್ನಿ ಜ್ಯೋತಿ ಗಾಣಿಗ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಲೆ ನಡೆದ ಬಳಿಕ ಈ ಇಬ್ಬರು ತಲೆಮರೆಸಿಕೊಂಡಿದ್ದರು. ತನಿಖೆ ಚುರುಕುಗೊಳಿಸಿರುವ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ವಾಟ್ಸಾಪ್ ಸ್ಟೇಟಸ್‌ ವಿಚಾರಕ್ಕೆ ಕೊಲೆ:
ಕೊಳವೆ ಬಾವಿಗೆ ಎನ್‌ಓಸಿ ನೀಡುವ ವಿಚಾರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್ ವಿರುದ್ಧದ ವಾಟ್ಸಾಪ್ ಸ್ಟೇಟಸ್‌ನ ದ್ವೇಷದಲ್ಲಿ ಗ್ರಾಪಂ ಅಧ್ಯಕ್ಷರ ನೇತೃತ್ವ ತಂಡ ಜೂನ್ 5ರಂದು ರಾತ್ರಿ ವೇಳೆ ಉದಯ ಗಾಣಿಗ ಅವರಿಗೆ ಕಾರು ಢಿಕ್ಕಿ ಹೊಡೆಸಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗಾಗಲೇ ಬಂಧಿತನಾಗಿರುವ ಪ್ರಮುಖ ಆರೋಪಿ ಯಡಮೊಗೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.