ಉಚ್ಚಿಲ ದಸರಾಗೆ ವಿದ್ಯುದ್ದೀಪಗಳ ಮೆರುಗು

ಉಡುಪಿ: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 11ರಿಂದ 21ರವರೆಗೆ ನಡೆಯಲಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ–2026ರ ಅಂಗವಾಗಿ ನಿರ್ಮಿಸಲಾಗಿರುವ ಆಕರ್ಷಕ ವಿದ್ಯುದ್ದೀಪಾಲಂಕಾರವನ್ನು ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರು ಶನಿವಾರ ಉದ್ಘಾಟಿಸಿದರು.

ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಕ್ತಾಭಿಮಾನಿಗಳು ಹಾಗೂ ಮೊಗವೀರ ಸಮಾಜದ ಸಹಕಾರದಲ್ಲಿ ಈ ಬಾರಿಯ ದಸರಾ ಉತ್ಸವ ಆಯೋಜಿಸಲಾಗಿದೆ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪರಿಸರದಿಂದ ಪಡುಬಿದ್ರಿ ಮೂಲಕ ಕಾಪು ಸಮುದ್ರ ತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂಕಾರವು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ದಸರಾ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಡುಪಿ–ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೆಂಗ್ರೆ, ಗಿರಿಧರ ಸುವರ್ಣ, ಮನೋಜ್ ಕಾಂಚನ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ ಹಾಗೂ ರತ್ನಾಕರ ಸಾಲ್ಯಾನ್ ಮಲ್ಪೆ ಉಪಸ್ಥಿತರಿದ್ದರು.