ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಜರಗಿದ ವೈಭವದ ಶೋಭಾ ಯಾತ್ರೆಗೆ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಮಂಗಳವಾರ ಸಂಜೆ ಗಣ್ಯರ ಜೊತೆಗೂಡಿ ಚಾಲನೆ ನೀಡಿದರು.
ಪ್ರಧಾನ ಅರ್ಚಕ ವೇ| ಮೂ|ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾ ಮಂಗಳಾರತಿ ಬೆಳಗಿ, ವಿಸರ್ಜನಾ ಪೂಜೆ ನಡೆಸಿದರು. ವಿವಿಧ ಟ್ಯಾಬ್ಲೋಗಳೊಂದಿಗೆ ಉಚ್ಚಿಲದಿಂದ ಕಾಲ್ನಡಿಗೆ ಮೂಲಕ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿಗೆ ಬಂದು ಕಾಪು ಬೀಚ್ ನಲ್ಲಿ ಸಮುದ್ರ ಮಧ್ಯದಲ್ಲಿ ಜಲಸ್ತಂಭನಗೊಳಿಸಲಾಯಿತು.
ಶೋಭಾಯಾತ್ರೆಯಲ್ಲಿ ಬೀಚ್ ನಲ್ಲಿ ಬೃಹತ್ ಗಂಗಾರತಿ, ಅತ್ಯಾಕರ್ಷಕ ಟ್ಯಾಬ್ಲೋ, ವಿಶಿಷ್ಟ ಕರಿಯಾನೆ ಕಣ್ಮನ ಸೆಳೆದವು. ಭಕ್ತಾದಿಮಾನಿಗಳು ವಿಜೃಂಭಣೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
ಉಚ್ಚಿಲ ದಸರಾ ಯಶಸ್ವಿಗೆ ಕೃತಜ್ಞತೆ: ಡಾ|ಜಿ.ಶಂಕರ್
ಉಚ್ಚಿಲ ದಸರಾ ಉತ್ಸವದಲ್ಲಿ 6-7 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು ನಭೂತೋ ಎಂಬಂತೆ ಆಚರಿಸಲಾಗಿದೆ. ಶಿಸ್ತುಬದ್ಧವಾಗಿ ನಡೆದ ಶೋಭಾಯಾತ್ರೆಯು ಯಶಸ್ವಿಯಾಗುವಲ್ಲಿ ಪೊಲೀಸ್ ಇಲಾಖೆ, ಸ್ವಯಂಸೇವಕರ ಸಹಕಾರ ಸ್ಮರಣೀಯವಾಗಿದೆ. ಉಚ್ಚಿಲ ದಸರಾ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸುತ್ತೇವೆ ಎಂದು ದಸರಾ ರೂವಾರಿ ಡಾ|ಜಿ.ಶಂಕರ್ ಅವರು ತಿಳಿಸಿದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್ ಪಾಲ್ ಸುವರ್ಣ, ಎಂಅರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಬಂಜಾರ, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್, ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ನಯನಾ ಗಣೇಶ್, ಶಿಲ್ಪಾ ಜಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಶ್ರೀಪತಿ ಭಟ್ ಹಾಗೂ ಇತರರು ಪಾಲ್ಗೊಂಡಿದ್ದರು.