ಮಲ್ಪೆ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಮಲ್ಪೆ ಬಳಿ ನೀರುಪಾಲಾಗಿದ್ದು, ಓರ್ವ ಬಾಲಕಿ ಸಾವನ್ನಪ್ಪಿದ್ದರೆ, ಮತ್ತೊರ್ವ ಬಾಲಕಿಯನ್ನು ರಕ್ಷಿಸಲಾಗಿದೆ.
ಮಡಿಕೇರಿ ಮೂಲದ ಮಾನ್ಯ ಮೃತ ರ್ದುದೈವಿ. ಬದುಕುಳಿದ ಯಶಸ್ವಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಈ ಬಾಲಕಿಯರು ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿತ್ತು. ಇದೀಗ ಮಲ್ಪೆ ಬಳಿ ನಿನ್ನೆ ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಬಾಲಕಿಯರು ಸಮುದ್ರ ಪಾಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಆಪತ್ಬಾಂಧವ ಈಶ್ವರ್ ಮಲ್ಪೆ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮತ್ತೊರ್ವ ಯುವತಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮಾಹಿತಿ ಪ್ರಕಾರ ಇಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂ) ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು. ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಸಾಥ್ ನೀಡಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿ. ಅವರು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿತ್ತು. ಹುಡುಗಿಯರು ಮಡಿಕೇರಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಮುಂದಿನ ದಾರಿ ಕಾಣದೆ ಮಲ್ಪೆ ತೀರಕ್ಕೆ ಬಂದಿದ್ದಾರೆ. ಸಮುದ್ರದಲ್ಲಿ ಆಡುತ್ತಿದ್ದಾಗ ಕಡಲ ಅಲೆಗಳಿಗೆ ಸಿಲುಕಿದ್ದಾರೆ. ಮಾಹಿತಿ ಪ್ರಕಾರ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿದೆ.
ಇವರಿಬ್ಬರೂ ಸುಮಾರು 12-14 ವರ್ಷದ ಪ್ರಾಯದ ಮಕ್ಕಳಾಗಿದ್ದು, ಯಾವ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.