ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನನ್ನು ಯಶಸ್ವಿಯಾಗಿ ಹೊರತೆಗೆದ ರಕ್ಷಣಾ ತಂಡ

ವಿಜಯಪುರ: ಆಟವಾಡುತ್ತಿದ್ದಾಗ ತೆರೆದ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸಾತ್ವಿಕ್ ಮುಜಗೊಂಡ್ ನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. 16 ಅಡಿ ಆಳದ ಕೊಳವೆಬಾವಿಯಲ್ಲಿ 18 ಗಂಟೆಗೂ ಹೆಚ್ಚು ಕಾಲ ಮಗು ಸಿಲುಕಿಕೊಂಡಿತ್ತು. ಇಂಡಿ ತಾಲೂಕಿನ ಲಚಯ್ಯನ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿತ್ತು. ಮಾಹಿತ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಪೈಪ್‌ಲೈನ್ ಮೂಲಕ ಪುಟ್ಟ ಮಗುವಿಗೆ ಆಮ್ಲಜನಕವನ್ನು ಪೂರೈಸಿದ್ದರು.

ಕ್ಯಾಮೆರಾ ಮೂಲಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯ ಉದ್ದಕ್ಕೂ ಮಗುವನ್ನು ನೋಡುತ್ತಿದ್ದರು. ಮಗುವನ್ನು ರಕ್ಷಿಸಲು ಸುಮಾರು 21 ಅಡಿ ಆಳದ ಸಮಾನಾಂತರವಾದ ಹೊಂಡವನ್ನುವನ್ನು ಅಗೆದು ಮಗುವನ್ನು ರಕ್ಷಿಸಿದ್ದಾರೆ. ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಮಗು ಸುರಕ್ಷಿತವಾಗಿ ಹೊರತೆಗೆಯಲ್ಪಟ್ಟಿದೆ.

ನೀರಾವರಿ ಉದ್ದೇಶಕ್ಕಾಗಿ ಮಗುವಿನ ಅಜ್ಜ ಮಂಗಳವಾರ ಕೊಳವೆಬಾವಿ ಕೊರೆಸಿದ್ದರು. ಈ ಕೊಳವೆ ಬಾವಿಗೆ ಮಗು ಬಿದ್ದಿದ್ದು, ಮಗುವಿನ ಕೂಗು ಕೇಳಿದ ದಾರಿಹೋಕರು ಕೂಡಲೇ ಮನೆಯವರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.