ಉಡುಪಿ: ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಡಿಸೆಂಬರ್ 19 ರ ಸಂಜೆ ಮಂಗಳವಾರದಿಂದ ಬುಧವಾರ ಮಧ್ಯಾಹ್ನದವರೆಗೆ ಮದುವೆ ಸಂಭ್ರಮ ಕಳೆ ಕಟ್ಟಿತ್ತು. ಸಂಜೆ ಮೆಹಂದಿ ಕಾರ್ಯಕ್ರಮ ನಡೆದರೆ, ಬೆಳಗ್ಗೆ ಎರಡು ಜೋಡಿಗಳ ವಿವಾಹ ಮಹೋತ್ಸವವು ಅಧಿಕಾರಿಗಳು, ಗಣ್ಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು.
ವಿವಾಹ ನಿಶ್ಚಯ ಕಾರ್ಯಕ್ರಮ ಜಿಲ್ಲಾಡಳಿತದ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ವರರ ಆರೋಗ್ಯ, ಗುಣ ನಡತೆ, ಅವರ ಆದಾಯ ಮತ್ತಿತರ ವಿವರಗಳನ್ನು ಕಲೆ ಹಾಕುವುದರೊಂದಿಗೆ ಜಿಲ್ಲಾಡಳಿತ, ವರಂದಿರ ಗುರು ಹಿರಿಯರು ಒಪ್ಪಿಗೆ
ನೀಡಿದರು.
ತುಮಕೂರು ಮೂಲದ 32 ವರ್ಷ ಪ್ರಾಯದ ಶೀಲಾ ಕಳೆದ 4 ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಿದ್ದು,
ಅನಾಥೆಯಾದ ಇವರನ್ನು ಕುಂದಾಪುರ ತಾಲೂಕಿನ ಬೆದ್ರಾಡಿಯ ಮಹಾಬಲ ಶಾಸ್ತ್ರಿಯ ಸುಪುತ್ರರಾದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದ 43 ವರ್ಷದ ಗಣೇಶ್ ಶಾಸ್ತ್ರಿ ಅವರೊಂದಿಗೆ ಹಾಗೂ ಭದ್ರಾವತಿ ಮೂಲದ 21 ವರ್ಷ ಪ್ರಾಯದ ಕುಮಾರಿ ಕಳೆದ ಎರಡು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಿದ್ದು, ಪೋಷಕರಿಲ್ಲದ ಇವರನ್ನು ಯಲ್ಲಾಪುರ ಮೂಲದ ನಂದೊಳ್ಳಿ ಅಣಲಗಾರದ ಹಾಲಿ ಬೆಳ್ಳಂಜೆಯಲ್ಲಿ ಪುರೋಹಿತ ಕೆಲಸ ನಿರ್ವಹಿಸುತ್ತಿರುವ 29 ವರ್ಷ ಪ್ರಾಯದ ಸತ್ಯನಾರಾಯಣ ಶ್ರೀಧರ ಭಟ್ಟ ಅವರಿಗೆ ವಿವಾಹ ಮಾಡಿ ಕೊಡಲಾಯಿತು.
ಮದುವೆ ಮುಹೂರ್ತದ ಶುಭ ಸಂದರ್ಭದಲ್ಲಿ ನವ ಜೋಡಿಗಳ ಧಾರೆ ಮುಹೂರ್ತದಲ್ಲಿ ಶಾಸಕ ಯಶ್ಪಾಲ್ ಸುವರ್ಣ,
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಹಿರಿಯ ಸಿವಿಲೆ ನ್ಯಾಯಾಧೀಶೆ ಶ್ಯಾಮಲಾ ಎಸ್, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ಮತ್ತಿತರರು ಆಶೀರ್ವದಿಸಿದರು.
ಖಾಸಗಿ ಮದುವೆಗಿಂತ ಕಡಿಮೆ ಇಲ್ಲದಂತೆ ಮದುವೆ ಚಪ್ಪರ, ಸ್ವಾಗತ ದ್ವಾರ, ಮಹಿಳಾ ಮಣಿಗಳು ಬಂದವರನ್ನು ತಂಪು ಪಾನೀಯ ಹಾಗೂ ಗುಲಾಬಿ ಹೂ ನೀಡುವುದರೊಂದಿಗೆ ಆಮಂತ್ರಿತರನ್ನು ಸ್ವಾಗತಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಮ್ಮ ಕುಟುಂಬದ ಮದುವೆಯಲ್ಲಿ ಆಮಂತ್ರಿತರನ್ನು ಸ್ವಾಗತಿಸುವ ರೀತಿಯಲ್ಲಿ ಸ್ವಾಗತಿಸಿ, ನಗುನಗುತ್ತಾ ಪ್ರತಿಯೊಬ್ಬರನ್ನು ಮಾತನಾಡಿಸುತ್ತಿದ್ದರು. ಅರ್ಚಕರು ಶಾಸ್ತ್ರೋಕ್ತವಾಗಿ ಅಗ್ನಿ ಸಾಕ್ಷಿಯೊಂದಿಗೆ ಮದುವೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರೆ, ಆಮಂತ್ರಿತರು ವಧು- ವರರಿಗೆ ಉಡುಗೊರೆಗಳನ್ನು ನೀಡುತ್ತಿರುವುದು ಸಹ ವಿಶೇಷವಾಗಿತ್ತು. ನವಜೋಡಿಯೊಂದಿಗೆ ಫೋಟೋ ಸೆಷನ್ನಲ್ಲಿ ನಗುನಗುತ್ತಾ ಎಲ್ಲರೂ ಭಾಗವಹಿಸುತ್ತಿದ್ದರು. ಮಹಿಳಾ ನಿಲಯದ ನಿವಾಸಿಗಳ ಮುಖದಲ್ಲಿಯೂ ಸಹ ಉತ್ಸಾಹ, ಸಂತೋಷ ತುಂಬಿ ತುಳುಕುತ್ತಿತ್ತು. ನವಜೋಡಿಗಳ ಮುಖದಲ್ಲಿಯೂ ಉಲ್ಲಾಸ ಎದ್ದು ಕಾಣುತ್ತಿತ್ತು. ಬಂದ ಆಮಂತ್ರಿತರು ಲಾಡು, ಹೋಳಿಗೆ, ಊಟದ ರಸದೌತಣ ಸವಿದರು.
ವರರಿಬ್ಬರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಕಳೆದ 2-3 ವರ್ಷಗಳಿಂದ ವಧುವಿನ ಅನ್ವೇಷಣೆಯಲ್ಲಿದ್ದು, ಸ್ನೇಹಿತರು ರಾಜ್ಯ ಮಹಿಳಾ ನಿಲಯದಲ್ಲಿ ಹೆಣ್ಣು ಮಕ್ಕಳು ಇರುವ ಬಗ್ಗೆ ತಿಳಿಸಿದಾಗ ನಾವು ಅಧಿಕಾರಿಗಳನ್ನು ಸಂಪರ್ಕಿಸಿ, ಅವರೊಂದಿಗೆ ವಿಶ್ವಾಸ ಗಳಿಸಿ, ಜಿಲ್ಲಾಡಳಿತ, ನಮ್ಮ ಗುರು-ಹಿರಿಯರು ಹಾಗೂ ವಧುವಿನ ಒಪ್ಪಿಗೆಯೊಂದಿಗೆ ಈ ಮದುವೆ ನಡೆಸಿದೆವು. ಇದು ನನಗೆ ಸಂತೋಷದ ವಿಚಾರ.
ಉಡುಪಿಯ ರಾಜ್ಯ ಮಹಿಳಾ ನಿಲಯವು 1976 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ 24 ಮಹಿಳೆಯರ ವಿವಾಹವು ಈ
ಸಂಸ್ಥೆಯಲ್ಲಿ ನಡೆದಿದೆ. ಪ್ರಸ್ತುತ 63 ಜನ ಮಹಿಳೆಯರು ಹಾಗೂ 5 ಜನ ಮಕ್ಕಳು ಇದ್ದಾರೆ. ಇವರಲ್ಲಿ ಮೂರು ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣವನ್ನು ಹೊಂದುತ್ತಿದ್ದರೆ, ಬಾಕಿ ಉಳಿದ ಮಹಿಳೆಯರು ಊದು ಬತ್ತಿ, ಮೇಣದ ಬತ್ತಿ ಸೇರಿದಂತೆ ಮತ್ತಿತರ ತಯಾರಿಕಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.