ಇಬ್ಬರು ಕೊಲೆ ಆರೋಪಿಗಳಿಂದ ಮಂಗಳೂರು ಪೊಲೀಸರ ಮೇಲೆ ಹಲ್ಲೆ: ಪೊಲೀಸರಿಂದ ಪ್ರತ್ಯುತ್ತರ

ಪಕ್ಷಿಕೆರೆ: ಜೂನ್ 11, ಶನಿವಾರದಂದು, ನಗರದ ಹೊರವಲಯದ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ಇಬ್ಬರು ಕೊಲೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು. ಇದಕ್ಕೆ ಪ್ರತ್ಯುತ್ತರ ನೀಡಿದ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳು ಮತ್ತು ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿದ್ದು, 1 ನೇ ಸುತ್ತು ಗಾಳಿಯಲ್ಲಿ ಮತ್ತು 2 ಸುತ್ತುಗಳನ್ನು ಆರೋಪಿಗಳ ಕಾಲನ್ನು ಗುರಿಯಾಗಿಸಿಟ್ಟುಕೊಂಡು ಹಾರಿಸಲಾಗಿದೆ. 3 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಅಲಿಯಾಸ್ ಬಿಂದಾಸ್ ಮನೋಜ್ ಜೊತೆಗೆ ಇಲಾಖೆಯ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಡೇವಿಡ್ ಮತ್ತು ಹೆಡ್ ಕಾನ್ ಸ್ಟೇಬಲ್ ಸುಧೀರ್ ಪೂಜಾರಿ ಗಾಯಗೊಂಡವರು.

ಇಬ್ಬರು ಆರೋಪಿಗಳು ಸೇರಿದಂತೆ ಎಲ್ಲಾ ಐವರು ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅರ್ಜುನ್ ಮತ್ತು ಮನೋಜ್ ಜೂನ್ 6 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಮಾಜಿ ಸಹಚರ ರಾಜು ಅಲಿಯಾಸ್ ರಾಘವೇಂದ್ರನನ್ನು ಕೊಲೆ ಮಾಡಿದ ಆರೋಪಿಗಳು. ಈ ಮೂವರೂ ನಗರದಲ್ಲಿ ನಡೆದ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ.

Image Credit: ANI/Twitter