ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್.ಐ.ಎ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತಿಬ್ಬರನ್ನು ಬಂಧಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿರುವ ಎನ್‌ಐಎ, ಶೋಧವನ್ನು ಮುಂದುವರೆಸಿದೆ. ಸದ್ಯ ಬಂಧನದಲ್ಲಿರುವ ಇವರಿಬ್ಬರು ನಿಷೇಧಿತ ಅಲ್ ಹಿಂದ್ ಟ್ರಸ್ಟ್ ಜೊತೆ ನಂಟು ಹೊಂದಿದ್ದರು ಎಂದು ತಿಳಿದು ಬಂದಿದೆ.

ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಹಿಂದಿನ ಕೆಲವು ಸ್ಫೋಟಗಳಿಗೂ ಸಾಮ್ಯತೆ ಇರುವುದರಿಂದ ಈ ಹಿಂದಿನ ಸ್ಫೋಟಗಳಲ್ಲಿ ಭಾಗಿಯಾಗಿರುವ ಹಲವರ ಮೇಲೆ ಎನ್‌ಐ ಕಣ್ಣಿಟ್ಟಿದೆ. ಶಂಕಿತರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ನೆರವು ನೀಡಿದವರ ಮೇಲೂ ನಿಗಾ ಇರಿಸಲಾಗಿದೆ.

ಪ್ರಸ್ತುತ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಹೊತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತರಿಂದ ಸ್ಫೋಟದ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಮಾಹಿತಿಯನ್ನು ತಾಂತ್ರಿಕವಾಗಿ ಮತ್ತು ಮೌಖಿಕವಾಗಿ ಪಡೆಯುವ ನಿರೀಕ್ಷೆ ಇದೆ. ಸದ್ಯದ ಮಾಹಿತಿ ಪ್ರಕಾರ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.