ಬೆಳ್ತಂಗಡಿ: ಎರಡು ಹದ್ದುಗಳ ಮೃತದೇಹ ಪತ್ತೆ; ಹಕ್ಕಿಜ್ವರದ ಭೀತಿ

ಬೆಳ್ತಂಗಡಿ: ತಾಲ್ಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಮಜಲು ಎಂಬಲ್ಲಿ ಇಂದು ಎರಡು ಹದ್ದುಗಳ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಹಕ್ಕಿಜ್ವರದ ಭೀತಿ ಹುಟ್ಟಿಸಿದೆ.

ನಿಡಿಗಲ್ ಮಜಲು ನಿವಾಸಿಗಳಾದ ಗೋಪಾಲ ಮಡಿವಾಳ ಹಾಗೂ ಶೇಖರ ಮಡಿವಾಳ ಅವರ ಗದ್ದೆಯಲ್ಲಿ ಕೊಳೆತ ಸ್ಥಿತಿಯಲಿದ್ದ ಹದ್ದುಗಳ ಶವ ಪತ್ತೆಯಾಗಿದೆ. ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಹಕ್ಕಿಜ್ವರದ ಆತಂಕ ಸೃಷ್ಟಿಯಾಗಿರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹದ್ದುಗಳ ಮೃತದೇಹದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿ ಬಂದ ಬಳಿಕವೇ ಹದ್ದುಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.‌ ಸುತ್ತಮುತ್ತಲಿನ ಪರಿಸರದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.