ಪುತ್ತೂರು: ಇಲ್ಲಿನ ನವರಾತ್ರಿ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಸೋಮವಾರ ಮಧ್ಯರಾತ್ರಿ ಪುತ್ತೂರು ಹೊರ ವಲಯದ ನೆಹರೂ ನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಕರಾವಳಿಯನ್ನು ಬೆಚ್ಚಿಬೀಳಿಸಿದೆ.
ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಮಧ್ಯರಾತ್ರಿ ಅಕ್ಷಯ್ ಮೇಲೆ ತಂಡವೊಂದು ದಾಳಿ ಮಾಡಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಅಂಶ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ. ಕಾಲೇಜು ರಸ್ತೆಯಲ್ಲಿ ದಾಳಿ ಮಾಡುತ್ತಿದ್ದಂತೆ ಅಕ್ಷಯ್ ಅಲ್ಲಿಂದ ಓಡಿದ್ದು, ದುಷ್ಕರ್ಮಿಗಳ ತಂಡ ಬೆನ್ನಟ್ಟಿಕೊಂಡು ಹೋಗಿದೆ. ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಮಾರಕ ದಾಳಿಗೆ ತುತ್ತಾದ ಅಕ್ಷಯ್ ಹೆದ್ದಾರಿಯ ಇನ್ನೊಂದು ಭಾಗದ ಖಾಲಿ ಜಾಗದ ಪೊದೆಯ ಪಕ್ಕದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತಡರಾತ್ರಿ ಹೊತ್ತಿಗೆ ಅಕ್ಷಯ್ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೂರು ಜನರಿದ್ದ ತಂಡವು ಅಕ್ಷಯ್ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಇವರಲ್ಲಿ ಇಬ್ಬರು ಮುಂಜಾನೆ ಹೊತ್ತಿಗೆ ಪುತ್ತೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ. ದುಡ್ಡಿನ ವಿಚಾರದಲ್ಲಿ ಪರಿಚಿತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಅಪಘಾತವೊಂದರ ವಿಚಾರದಲ್ಲಿ ಪರಸ್ಪರ ಚರ್ಚೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ತಡರಾತ್ರಿ ಅಕ್ಷಯ್ ಅನ್ನು ನೆಹರೂ ನಗರದ ಬಳಿ ಕರೆಸಿ ಕೊಲೆ ಮಾಡಲಾಗಿದೆಯೇ ಎಂಬ ಅನುಮಾನದ ಸುತ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.