ಮಂಗಳೂರು: ದೈವ–ದೇವರ ನಿಂದೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರಂಗಭೂಮಿ, ಯಕ್ಷಗಾನ ಮತ್ತು ಸಿನಿಮಾ ಕಲಾವಿದರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿ ಕಲಾವಿದರು ಸೋಮವಾರ ನಡೆಸಿದ ಸಭೆಯಲ್ಲಿ ತೀವ್ರ ಹೋರಾಟಕ್ಕೆ ಇಳಿಯಲು ನಿರ್ಧರಿಸಲಾಯಿತು.
ತುಳು ನಾಟಕ ಕಲಾವಿದರ ಒಕ್ಕೂಟ, ಜಿಲ್ಲಾ ರಂಗ ಸಮ್ಮಿಲನ ವೇದಿಕೆ, ಕೋಸ್ಟಲ್ ವುಡ್ ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟ ಮತ್ತು ಯಕ್ಷಗಾನ ಕಲಾವಿದರು ಸೋಮವಾರದಂದು ಡಾನ್ ಬಾಸ್ಕೋ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು, ವಿಜಯಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್, ಅಶೋಕ್ ಶೆಟ್ಟಿ ಸರಪಾಡಿ ಮತ್ತಿತರರ ನೇತೃತ್ವದಲ್ಲಿ ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಲಾವಿದರ ಮೇಲಿನ ದೌರ್ಜನ್ಯವನ್ನು ಖಂಡಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಸಭೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಿಜಯಕುಮಾರ್ ಕೊಡಿಯಾಲ್ಬೈಲ್ ‘ಕಲಾವಿದರ ಮೇಲೆ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ಈಗಾಗಲೇ ಪ್ರತಿರೋಧ ಆರಂಭವಾಗಿದೆ. ಸಭೆಯು ಕಲಾವಿದರಿಗೆ ಇನ್ನಷ್ಟು ಶಕ್ತಿ ತುಂಬಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.
ದೇವದಾಸ್ ಕಾಪಿಕಾಡ್ ಮಾತನಾಡಿ ಕಲೆ ಮತ್ತು ಕಲಾವಿದರಿಂದ ನಾಡಿಗೆ ಗೌರವ ಸಂದಿದೆ. ದೈವ ಮತ್ತು ದೇವರನ್ನು ಅವಹೇಳನ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಈ ಕುರಿತು ಮುಕ್ತ ಮಾತುಕತೆಗೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಹೋರಾಟ ಅನಿವಾರ್ಯ ಆಗಿದೆ ಎಂದರು.
ಕಲಾವಿದರ ಸಂಕಟ ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ತುಳುನಾಡಿನ ಕಲೆ, ಸಂಸ್ಕೃತಿ ಉಳಿಸುವಲ್ಲಿ ಕಲಾವಿದರು ಮಹತ್ವದ ಪಾತ್ರ ವಹಿಸಿದ್ದಾರೆ. ಕಲಾವಿದರು ಕೂಡ ದೇವರು–ದೈವವನ್ನು ನಂಬುವವರು. ಆದ್ದರಿಂದ ನಿಂದನೆ ಮಾಡಲು ಸಾಧ್ಯವಿಲ್ಲ. ಕೆಣಕಿದರೆ ದೈವ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ನಮಗೂ ಗೊತ್ತು ಎಂದು ಅವರು ಹೇಳಿದರು.
ಈಗ ರಂಗಚಟುವಟಿಕೆ ಮೇಲೆ ತೂಗುಗತ್ತಿ ನಿಂತಿದೆ. ಅದನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ತಂಟೆಗೆ ಬಂದರೆ ಸಮ್ಮೇಳನಆ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿ.ಕೆ.ಗಟ್ಟಿ, ಜಗನ್ ಪವಾರ್ ಬೇಕಲ್, ಪ್ರಕಾಶ್, ಪುಷ್ಪಾ, ಶರತ್ ಶೆಟ್ಟಿ ಕಿನ್ನಿಗೋಳಿ, ಮಧು ಬಂಗೇರ, ಕಿಶೋರ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.