ತುಳು ಭಾಷೆ ನಮ್ಮ‌ಸಂಸ್ಕೃತಿಯ ಪ್ರತಿರೂಪ: ಜಯಕರ ಶೆಟ್ಟಿ

ಉಡುಪಿ: ತುಳು ಎನ್ನುವುದು ಕೇವಲ ಭಾಷೆಯಲ್ಲ, ಅದು ತುಳುನಾಡಿನ ಸಂಸ್ಕೃತಿಯ ಪ್ರತಿರೂಪ ಎಂದು ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಜೈ ತುಳುನಾಡ್‌ ಒಡಿಪು, ತುಳು ಪಾತೆರ್ಗ ತುಳು ಒರಿಪಾಗ ಕುಡ್ಲ–ದುಬೈ ಹಾಗೂ ನಮ್ಮ ತುಳುನಾಡ್‌ ಟ್ರಸ್ಟ್‌ ಸಹಯೋಗದಲ್ಲಿ ಕೊಡವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಬನ್ನಿ ತುಳು ಲಿಪಿ ಕಲಿಯುವ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಸಾಹಿತ್ಯ, ಸಂಸ್ಕಾರ ಹೊಂದಿರುವ ಸಮೃದ್ಧ ಭಾಷೆ. ಪ್ರತಿಯೊಬ್ಬರು ಕನಿಷ್ಠ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲು ಕಲಿಯಬೇಕು. ತುಳುವಿಗೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡವೂರು ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಇಂದು ನಾವು ನಮ್ಮ ಮಾತೃ ಭಾಷೆಯಾದ ತುಳುವನ್ನು ಸಂಪೂರ್ಣವಾಗಿ ಕಡೆಗಣಿಸಿ ಮುನ್ನಡೆಯುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಇದರಿಂದ ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಧುನಿಕ ಭರಾಟೆಯಲ್ಲಿ ಕೂಡು‌ ಕುಟುಂಬಗಳು ಒಡೆದು, ವಿಭಕ್ತ ಕುಟುಂಬಗಳಾಗುತ್ತಿವೆ. ಇದರಿಂದ ಅಜ್ಜ–ಅಜ್ಜಿ, ಅಕ್ಕ–ಅಣ್ಣ, ತಮ್ಮ–ತಂಗಿ ಹೀಗೆ ಮನುಷ್ಯ ಸಂಬಂಧಗಳೇ ಮರೆಯಾಗುತ್ತಿದೆ. ಇದು ತುಳುನಾಡಿನ ಆಚಾರ–ವಿಚಾರ, ಸಂಪ್ರದಾಯಗಳ ಮೇಲೂ ಪರಿಣಾಮ ಬೀರಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಆಕಾಶ್‌ರಾಜ್‌ ಜೈನ್‌,ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ಪ್ರಕಾಶ್‌, ಕೊಡವೂರು ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ರಾಮ ಶೇರಿಗಾರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶೈಲಜಾ, ಪತ್ರಕರ್ತೆ ಯಶೋದ ಕೇಶವ್‌, ಜೈ ತುಳುನಾಡ್‌ ಸಂಘಟಕ ಶರತ್‌ ಕೊಡವೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಜಿ.ವಿ.ಎಸ್‌. ಉಲ್ಲಾಳ್‌ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ್‌ ವಂದಿಸಿದರು. ಕಾರ್ಯಾಗಾರದಲ್ಲಿ 150 ಮಂದಿ ಪಾಲ್ಗೊಂಡಿದ್ದರು.
ತುಳು ಭಾಷೆ ರಕ್ಷಣೆ ನಮ್ಮ ಹೊಣೆ:
ಅವನತಿಯ ಕಡೆಗೆ ಸಾಗುತ್ತಿರುವ ತುಳು ಭಾಷೆಯನ್ನು ರಕ್ಷಣೆ ಮಾಡುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ತುಳು ಭಾಷೆ ರಕ್ಷಿಸುವ ಮೂಲಕ ತುಳು ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಬೆಳೆಸಬೇಕು. ಹಾಗೆಯೇ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕು ಎಂದು ನಗರಸಭಾ ಸದಸ್ಯ ವಿಜಯ ಕೊಡವೂರು ಎಂದರು.