ಉಡುಪಿ: ದಶಕಗಳ ಕಾಲ ಭೂಗತ ಲೋಕದ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ನಿಧನದ ಬಳಿಕ ಡಾನ್ ಪಟ್ಟ ಖಾಲಿಯಾಗಿದೆ. ಇದೀಗ ಡಾನ್ ಪಟ್ಟದ ಮೇಲೆ ಹಲವು ಪಾತಕಿಗಳ ಕಣ್ಣು ನೆಟ್ಟಿದ್ದು, ಡಾನ್ ಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಇದಕ್ಕೆ ಇತ್ತೀಚೆಗೆ ನಡೆದ ಸರಣಿ ಕೊಲೆಗಳೇ ಸಾಕ್ಷಿ.
ಕರಾವಳಿ ಮೂಲದ ಪಾತಕಿಗಳು ಭೂಗತ ಲೋಕದ ಡಾನ್ ಪಟ್ಟಕ್ಕಾಗಿ ಕಸರತ್ತು ಮಾಡುತ್ತಿದ್ದಾರೆ. ಡಾನ್ ಪಟ್ಟಕ್ಕಾಗಿ ಪಾತಕಿಗಳ ನಡುವೆ ಬಿಗ್ ಪ್ಲ್ಯಾನ್ ನಡೆಯುತ್ತಿದೆ. ಭೂಗತ ಪಾತಕಿಗಳಾದ ವಿಕ್ಕಿ ಶೆಟ್ಟಿ, ರವಿ ಪೂಜಾರಿ ಹಾಗೂ ಬನ್ನಂಜೆ ರಾಜ ಡಾನ್ ಪಟ್ಟಕ್ಕಾಗಿ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಆದರೆ ರವಿ ಪೂಜಾರಿ, ಬನ್ನಂಜೆ ರಾಜ ಈಗಾಗಲೇ ಜೈಲು ಸೇರಿರುವುದರಿಂದ ಡಾನ್ ಪಟ್ಟದ ರೇಸ್ ನಲ್ಲಿ ವಿಕ್ಕಿ ಶೆಟ್ಟಿಯ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಜೈಲು ಸೇರಿರುವ ಪಾತಕಿಗಳು:
ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಮೆರೆದಿದ್ದ ಮಲ್ಪೆ ಮೂಲದ ಭೂಗತ ಪಾತಕಿ ರವಿ ಪೂಜಾರಿ ಜೈಲು ಸೇರಿದ್ದಾನೆ. ಆತನಿಗೆ ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಅಲ್ಲದೆ ಜೈಲಿನಲ್ಲೇ ಇದ್ದುಕೊಂಡು ಅಂಡರ್ ವರ್ಲ್ಡ್ ಹ್ಯಾಂಡಲ್ ಮಾಡುವುದು ಕಷ್ಟ. ಆದ್ದರಿಂದ ಇನ್ನೂ ಪೂಜಾರಿ ಮತ್ತೆ ಭೂಗತ ಲೋಕಕ್ಕೆ ಎಂಟ್ರಿ ಕೊಡುವುದು ಅನುಮಾನವೆಂದು ಹೇಳಲಾಗುತ್ತಿದೆ. ಹೀಗಾಗಿ ಆತನ ಸಾಕಷ್ಟು ಮಂದಿ ಸಹಚರರು ದೂರ ಆಗಿದ್ದಾರೆ.
ಉಡುಪಿ ಮೂಲದ ಮತ್ತೊಬ್ಬ ಡಾನ್ ಬನ್ನಂಜೆ ರಾಜ ಕೂಡ ಜೈಲಿನಲ್ಲಿದ್ದಾನೆ. ಈತನ ಚಟುವಟಿಕೆಗಳು ಕೂಡ ಬಹುತೇಕ ಸ್ಥಗಿತಗೊಂಡಿದೆ. ಈತನ ಹೆಸರಿನಲ್ಲಿ ಸಣ್ಣಪುಟ್ಟ ಭೂ ವ್ಯವಹಾರಗಳು ನಡೆಯುತ್ತಿದೆ ಬಿಟ್ಟರೆ, ಮೊದಲಿನಂತೆ ಹೇಳಿಕೊಳ್ಳುವಂತಹ ಹವಾ ಉಳಿದಿಲ್ಲ. ಅಲ್ಲದೆ, ಈತ ಭೂಗತ ಜಗತ್ತಿನಿಂದ ಹೊರಬರಲು ಬಯಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.
ಮುತ್ತಪ್ಪ ರೈ ಜೊತೆ ಮುನಿಸಿಕೊಂಡ ಬಳಿಕ ಕರಾವಳಿಯ ಡಾನ್ ರಾಕೇಶ್ ಮಲ್ಲಿ ಕೂಡ ಭೂಗತ ಜಗತ್ತಿನಿಂದ ದೂರ ಆಗಿದ್ದಾನೆ. ರಾಜಕೀಯ ಪಕ್ಷವೊಂದರ ಮೂಲಕ ಗುರುತಿಸಿಕೊಂಡ ಬಳಿಕ ಭೂಗತ ಜಗತ್ತಿನಿಂದ ಸಂಪೂರ್ಣ ದೂರ ಆಗಿದ್ದಾನೆ. ಭೂಗತ ಲೋಕದ ಡಾನ್ ಪಟ್ಟಕ್ಕೆ ಕಣ್ಣಿಟ್ಟಿದ್ದ ರಶೀದ್ ಮಲಬಾರಿ ಜೈಲಿನಿಂದ ಬಿಡುಗಡೆಯಾದ ಬಳಿಕ ಎಲ್ಲಿದ್ದಾನೋ ಗೊತ್ತಿಲ್ಲ.
ಡಾನ್ ಪಟ್ಟಕ್ಕೆ ವಿಕ್ಕಿ ಶೆಟ್ಟಿ ಕಸರತ್ತು.?
ಮುತ್ತಪ್ಪ ರೈ ನಿಧನದ ಬಳಿಕ ವಿಕ್ಕಿ ಶೆಟ್ಟಿಯಿಂದ ಅಂಡರ್ ವರ್ಲ್ಡ್ ಡಾನ್ ಪಟ್ಟಕ್ಕಾಗಿ ಸಂಚು ನಡೆಯುತ್ತಿದ್ದು, ಇದಕ್ಕೆ ಬೇಕಾದ ಪ್ಲ್ಯಾನ್ ಗಳನ್ನು ರೂಪಿಸುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೆ, ತನ್ನ ಆಪ್ತ ಕಿಶನ್ ಹೆಗ್ಡೆಯನ್ನು ಕೊಲೆ ಮಾಡಿಸಿದ ರೌಡಿಗಳನ್ನು ಈಗಾಗಲೇ ಸಹಚರರ ಮೂಲಕ ಕೊಲೆ ಮಾಡಿಸಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಕಿಶನ್ ಹತ್ಯೆಗೆ ಸಹಕರಿಸಿದ ಎದುರಾಳಿ ಬೆಂಗಳೂರಿನ ಡ್ಯೂಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಶೂಟೌಟ್ ಮೂಲಕ ಮಟ್ಟಹಾಕಿದ್ದ. ಅಲ್ಲದೆ ಮೊನ್ನೆ ಸುರೇಂದ್ರ ಬಂಟ್ವಾಳನನ್ನು ಹತ್ಯೆ ಮಾಡಿಸಿದ್ದು ವಿಕ್ಕಿ ಶೆಟ್ಟಿ ಎಂದು ಹೇಳಲಾಗುತ್ತಿದೆ. ಆ ಮೂಲಕ ತನ್ನ ವಿರೋಧಿಗಳಿಗೆ ಬಹಿರಂಗವಾಗಿಯೇ ಎಚ್ಚರಿಕೆ ರವಾನಿಸಿದ್ದಾನೆ. ಈತನ ಇತ್ತೀಚಿನ ಚಟುವಟಿಕೆಗಳು ಗಮನಿಸಿದರೆ ಡಾನ್ ಪಟ್ಟಕ್ಕಾಗಿ ಸಂಚು ರೂಪಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಹೈ ಅಲರ್ಟ್ ಆದ ಪೊಲೀಸರು:
ಪಾತಕಿ ವಿಕ್ಕಿ ಶೆಟ್ಟಿ ಭೂಗತ ಜಗತ್ತನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲೇ ಮಟ್ಟಹಾಕಲು ಪೊಲೀಸರು ಫ್ಲ್ಯಾನ್ ಮಾಡಿದ್ದಾರೆ. ವಿಕ್ಕಿ ಶೆಟ್ಟಿ ನೆಟ್ ವರ್ಕ್ ಹೇಗಿದೆ.? ಆತನ ಸಹಚರರು ಯಾರಿದ್ದಾರೆ.? ಎಂಬುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಆತನ ಸಹಚರರ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಅಲ್ಲದೆ, ಮನೀಶ್ ಶೆಟ್ಟಿಯನ್ನು ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗೆ ಈ ಭೂಗತ ಚಟುವಟಿಕೆಗಳಿಗೆ ಪೊಲೀಸರು ಯಾವ ರೀತಿ ಕಡಿವಾಣ ಹಾಕುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.