ಮತ್ತೆ ತಾನೇ ಅಧಿಕಾರಕ್ಕೆ ಬಂದರೆ ಅಮೆರಿಕ ಪ್ರತಿ ಪ್ರಜೆಗೆ ಭರ್ಜರಿ ₹4.75 ಲಕ್ಷ: ಬಂಪರ್ ಆಫರ್ ಘೋಷಿಸಿದ ಟ್ರಂಪ್!

ವಾಷಿಂಗ್ಟನ್‌: ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಉಚಿತ ಯೋಜನೆಗಳು ಹಾಗೂ ಹಣ ನೀಡುವ ಭರವಸೆಗಳು ಸಾಮಾನ್ಯವಾಗಿರುವ ಬೆನ್ನಲ್ಲೇ, ಇದೀಗ ಅಮೆರಿಕದಲ್ಲೂ ಇಂತಹದ್ದೊಂದು ರಾಜಕೀಯ ಘೋಷಣೆ ಸದ್ದು ಮಾಡಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷ ಮತ್ತೆ ಅಧಿಕಾರ ಉಳಿಸಿಕೊಂಡರೆ ದೇಶದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ 5,000 ಡಾಲರ್‌ (ಸುಮಾರು ₹4.75 ಲಕ್ಷ) ‘ಡಿವಿಡೆಂಡ್‌’ ನೀಡುವುದಾಗಿ ಘೋಷಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷವು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಮತ್ತು ಸೆನೆಟ್‌ ಎರಡರಲ್ಲೂ ಬಹುಮತವನ್ನು ಉಳಿಸಿಕೊಂಡರೆ ಈ ಹಣವನ್ನು ನೀಡುವುದಾಗಿ ಟ್ರಂಪ್‌ ಭರವಸೆ ನೀಡಿದ್ದಾರೆ.

ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ಮೊದಲ ಮಧ್ಯಂತರ ಸಮಾವೇಶದಲ್ಲಿ ಸುಮಾರು 1 ಗಂಟೆ 45 ನಿಮಿಷಗಳ ಕಾಲ ಮಾತನಾಡಿದ ಟ್ರಂಪ್‌, ಉಭಯ ಸದನಗಳಲ್ಲೂ ರಿಪಬ್ಲಿಕನ್‌ ಪಕ್ಷ ಜಯಗಳಿಸಿದರೆ ಪ್ರತಿಯೊಬ್ಬ ಅಮೆರಿಕನ್‌ ವಯಸ್ಕ ನಾಗರಿಕನಿಗೂ 5,000 ಡಾಲರ್‌ ‘ಟ್ರಂಪ್‌ ಡಿವಿಡೆಂಡ್‌’ ನೀಡುವುದಾಗಿ ಹೇಳಿದ್ದಾರೆ.

ಹಣ ಎಲ್ಲಿಂದ ಬರುತ್ತದೆ?

ಕಂಪನಿಗಳು ತಮ್ಮ ಷೇರುದಾರರಿಗೆ ಡಿವಿಡೆಂಡ್‌ ನೀಡುವ ರೀತಿಯಲ್ಲಿ ಅಮೆರಿಕನ್ನರಿಗೆ ಈ ಹಣವನ್ನು ವಿತರಿಸಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಯೋಜನೆಗೆ ಅಗತ್ಯವಿರುವ ಹಣವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದರ ಕುರಿತು ಅವರು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಅಲ್ಲದೆ, ಈ ಯೋಜನೆಯನ್ನು ಜಾರಿಗೆ ತರಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಬಗ್ಗೆಯೂ ಟ್ರಂಪ್‌ ವಿವರ ನೀಡಿಲ್ಲ.

ಅಮೆರಿಕದಲ್ಲಿ ಸುಮಾರು 27 ಕೋಟಿ ವಯಸ್ಕ ನಾಗರಿಕರು ಇದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರತಿಯೊಬ್ಬರಿಗೂ 5,000 ಡಾಲರ್‌ ನೀಡಬೇಕಾದರೆ ಸರ್ಕಾರಕ್ಕೆ ಸುಮಾರು 1.35 ಟ್ರಿಲಿಯನ್‌ ಡಾಲರ್‌ (ಅಂದಾಜು ₹128.55 ಲಕ್ಷ ಕೋಟಿ) ಅಗತ್ಯವಾಗಲಿದೆ.

ಹೀಗಾಗಿ ಟ್ರಂಪ್‌ ಘೋಷಿಸಿರುವ ‘ಟ್ರಂಪ್‌ ಡಿವಿಡೆಂಡ್‌’ ಯೋಜನೆ ಇದೀಗ ಅಮೆರಿಕದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.