ಉಡುಪಿ: ಬ್ರಹ್ಮಾವರ ತಾಲೂಕಿನ ಕುಂಜಾಲು ಗ್ರಾಮದ ಆರೂರು ತೆಂಕುಬೆಟ್ಟುವಿನಲ್ಲಿ ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಲಾರಿಯಲ್ಲಿ ಒಣಹುಲ್ಲಿನ ಮೂಟೆಗಳನ್ನು ಸಾಗಿಸುತ್ತಿದ್ದ ವೇಳೆ ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಹುಲ್ಲಿಗೆ ತಗುಲಿದೆ. ಇದರಿಂದ ಒಣಹುಲ್ಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ತಕ್ಷಣ ಎಚ್ಚೆತ್ತುಕೊಂಡ ಚಾಲಕ, ಬೆಂಕಿ ಕಾಣಿಸಿಕೊಂಡ ಎರಡು ಹುಲ್ಲಿನ ಮೂಟೆಗಳನ್ನು ಲಾರಿಯಿಂದ ರಸ್ತೆಗೆ ಎಸೆದಿದ್ದಾರೆ.

ಬಳಿಕ ಲಾರಿಯನ್ನು ಸಮೀಪದ ಕ್ರೀಡಾಂಗಣದ ಬಳಿಗೆ ಕೊಂಡೊಯ್ದು ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಾಹಿತಿ ತಿಳಿದ ಕೂಡಲೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆಯಿಂದ ಸುಮಾರು ₹1.5 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.















