ಹಿಟ್ ಎಂಡ್ ರನ್ ಕಾನೂನು: ರಸ್ತೆ ತಡೆ ನಡೆಸಿ ವಿರೋಧ ವ್ಯಕ್ತಪಡಿಸುತ್ತಿರುವ ಟ್ರಕ್ ಚಾಲಕರು

ನವದೆಹಲಿ: ಭಾರತೀಯ ದಂಡ ಸಂಹಿತೆಯನ್ನು ಬದಲಿಸಲಿರುವ ಹೊಸ ಭಾರತೀಯ ನ್ಯಾಯ ಸಂಹಿತೆಯಡಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡಿ ಓಡಿಹೋಗುವ(ಹಿಟ್ ಎಂಡ್ ರನ್ ಪ್ರಕರಣ) ಚಾಲಕರಿಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸುವ ನಿಬಂಧನೆಯನ್ನು ಸೇರಿಸಲಾಗಿದೆ.

ಈ ಕಾನೂನನ್ನು ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಟ್ರಕ್‌ಗಳು ಮತ್ತು ಟ್ಯಾಂಕರ್‌ಗಳು ಸೇರಿದಂತೆ ವಾಣಿಜ್ಯ ವಾಹನಗಳ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸ ಕಾನೂನಿನ ಪ್ರಕಾರ, ಹಿಟ್ ಎಂಡ್ ರನ್ ಪ್ರಕರಣಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ ದಂಡ ವಿಧಿಸಬಹುದು.

ಸೋಮವಾರದಂದು ಮಹಾರಾಷ್ಟ್ರದ ಹಲವೆಡೆ ಟ್ರಕ್ ಚಾಲಕರು ‘ರಸ್ತೆ ತಡೆ’ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಿಂದ ಕೆಲವೆಡೆ ಇಂಧನ ಕೊರತೆಯ ಭೀತಿ ಎದುರಾಗಿದೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಕೆಲವು ಪೆಟ್ರೋಲ್ ಪಂಪ್‌ಗಳು ಈಗಾಗಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೊಲ್ಲಾಪುರ, ಕೊಲ್ಹಾಪುರ, ನಾಗಪುರ ಮತ್ತು ಗೊಂಡಿಯಾ ಜಿಲ್ಲೆ, ಗುಜರಾತ್ ಮತ್ತು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವು ಕಡೆ ರಸ್ತೆ ತಡೆ ಪ್ರತಿಭಟನೆಗಳು ನಡೆದಿವೆ.