ಮಮತಾ ಬ್ಯಾನರ್ಜಿಗೆ ಸಂಕಷ್ಟ: ಪಶ್ಚಿಮ ಬಂಗಾಳದ ಮೊಮಿನ್‌ಪುರ ಹಿಂಸಾಚಾರದ ತನಿಖೆ ಎನ್‌ಐಎ ತೆಕ್ಕೆಗೆ

ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸಂಕಷ್ಟ ಎದುರಾಗಿದ್ದು, ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಮೊಮಿನ್‌ಪುರ ಮತ್ತು ಅಕ್ಕ ಪಕ್ಕದಲ್ಲಿ ಅಕ್ಟೋಬರ್ 9 ರಂದು ನಡೆದ ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ವರದಿ ಪಡೆದ ನಂತರ ಗೃಹ ಸಚಿವಾಲಯವು ಎನ್‌ಐಎ ತನಿಖೆಗೆ ಅನುಮೋದನೆ ನೀಡಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಹಿಂದೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಬೇಕು ಮತ್ತು ಎನ್‌ಐಎಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ನಗರದಲ್ಲಿ ದಾಖಲಾದ ಐದು ಎಫ್‌ಐಆರ್‌ಗಳ ಪ್ರತಿಯನ್ನು ಕೋಲ್ಕತ್ತಾ ಪೊಲೀಸರು ಈಗಾಗಲೇ ಹಸ್ತಾಂತರಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 57 ಜನರನ್ನು ಬಂಧಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಅನುಸರಿಸಿ, ನಗರ ಪೊಲೀಸರು ಈಗಾಗಲೇ ವಿಶೇಷ ತನಿಖಾ ತಂಡ ಅಥವಾ ಎಸ್‌ಐಟಿಯನ್ನು ರಚಿಸಿದ್ದು, ಪ್ರಕರಣದ ತನಿಖೆಗಾಗಿ ಕೋಲ್ಕತ್ತಾದ ಉನ್ನತ ಪೋಲೀಸ್ ಚುಕ್ಕಾಣಿ ಹಿಡಿದಿದ್ದಾರೆ.

ಪೊಲೀಸರ ಪ್ರಕಾರ, ಮಿಲಾದ್ ಅನ್-ನಬಿಗೆ ಹಾಕಲಾಗಿದ್ದ ಧಾರ್ಮಿಕ ಧ್ವಜಗಳನ್ನು ಕಿತ್ತುಹಾಕಿದ ನಂತರ ಹಿಂಸಾಚಾರ ಸಂಭವಿಸಿದೆ. ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಜನರು ಎಕ್ಬಾಲ್‌ಪುರ ಪೊಲೀಸ್ ಠಾಣೆಯನ್ನು ಸುತ್ತುವರೆದರು. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಹಿಂಸಾಚಾರದಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಸೌಮ್ಯಾ ರಾಯ್ ಸೇರಿದಂತೆ ಹಲವು ಪೊಲೀಸರು ಕಚ್ಚಾ ಬಾಂಬ್ ದಾಳಿಗೆ ಒಳಗಾಗಿದ್ದರು.