ನವದೆಹಲಿ: ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡುವ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರು ತನ್ನ ಪತ್ನಿಯರಿಗೆ ತ್ರಿವಳಿ ತಲಾಖ್ ನೀಡಿದರೆ ಜೈಲು ಪಾಲಾಗುವುದು ಖಚಿತವಾಗಿದೆ.
ಈ ಕಾಯ್ದೆಯು ಶೀಘ್ರವೇ ದೇಶದಲ್ಲಿ ಜಾರಿಯಾಗಲಿದೆ. ಈಗಾಗಲೇ ಈ ಮಸೂದೆಗೆ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಸದ್ಯ ರಾಷ್ಟ್ರಪತಿ ಅವರೂ ಅನುಮೋದನೆ ನೀಡಿದ್ದಾರೆ.
ತ್ರಿವಳಿ ತಲಾಖ್ ನಿಂದಾಗಿ ದೇಶದಲ್ಲಿ ಲಕ್ಷಾಂತರ ಮುಸ್ಲಿಂ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ಇಶ್ರತ್ ಜಹಾನ್, ನೂರ್ ಜಹಾನ್ ಸೇರಿ ಹಲವು ಮುಸ್ಲಿಂ ಮಹಿಳೆಯರು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಹೀಗಾಗಿ ಇನ್ನು ಮುಸ್ಲಿಂ ಪತಿಯರು ಪತ್ನಿಯರಿಗೆ ಫೋನ್, ವಾಟ್ಸ್ಆ್ಯಪ್, ಮೆಸೇಜ್, ಪೋಸ್ಟ್ ಸೇರಿ ಯಾವುದೇ ಮಾಧ್ಯಮದ ಮೂಲಕವೂ ತ್ರಿವಳಿ ತಲಾಖ್ ನೀಡುವಹಾಗಿಲ್ಲ. ತಲಾಖ್ ಸಾಬೀತಾದರೆ, ಪತಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ನೀಡುವುದು ಕಾಯ್ದೆಯ ನಿಯಮವಾಗಿದೆ.
ಈ ಹಿಂದೆ ತ್ರಿವಳಿ ತಲಾಖ್ ನಿಷೇಧಿಸಬೇಕು ಎಂದು ಸುಪ್ರೀಂಕೋರ್ಟ್ ಸಹ ಅದೇಶ ಹೊರಡಿಸಿತ್ತು.