ತ್ರಿಶಾ ವಿದ್ಯಾ ಕಾಲೇಜು ವಿದ್ಯಾರ್ಥಿಗಳಿಂದ ಬೈಲೂರು ರಾಮಕೃಷ್ಣ ಆಶ್ರಮಕ್ಕೆ ಭೇಟಿ

ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಬೈಲೂರು ರಾಮಕೃಷ್ಣ ಆಶ್ರಮಕ್ಕೆ ಭೇಟಿ ಹಾಗೂ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ರಾಮಕೃಷ್ಣ ಆಶ್ರಮದ ಸ್ವಾಮೀಜಿ ವಿನಾಯಕಾನಂದ ಜೀ ಮಹಾರಾಜ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮನಸ್ಸು ಚಂಚಲವಾಗಿದ್ದು ಎಲ್ಲವನ್ನೂ ಬಯಸುತ್ತದೆ. ಸುತ್ತಮುತ್ತ ಅಡೆತಡೆಗಳು ಬಹಳಷ್ಟು ಬರುತ್ತದೆ ಆದರೆ ಮನಸ್ಸು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಗುರಿ ಸ್ಪಷ್ಟವಾಗಿರಬೇಕು. ಹಾಗಿದ್ದಾಗ ಮಾತ್ರ ಅದ್ಭುತ ಸಾಧನೆ ಮಾಡೋಕೆ ಸಾಧ್ಯ ಎಂದರು.

ಬಳಿಕ ಮಕ್ಕಳಿಗೆ ಧ್ಯಾನಯೋಗದ ಪ್ರಾತ್ಯಕ್ಷಿಕೆ ಮಾಡಿಸಿದರು.

ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸುವಾಗಲೂ ಇವತ್ತಿನ ದಿನವೇ ಪ್ರಶಸ್ತವಾದದ್ದು ಎಂದು ಭಾವಿಸಿ ಪ್ರಾರಂಭಿಸಬೇಕು. ಅಷ್ಟೇ ಅಲ್ಲದೆ ಜಗತ್ತು ದಿನೇ ದಿನೇ ಬದಲಾಗುತ್ತಿದೆ. ಬದಲಾವಣೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳದೆ ಹೋದರೆ ಹಿಂದೆ ಉಳಿದು ಬಿಡುತ್ತೇವೆ ಎಂದರು.

ತೃತೀಯ ಬಿ.ಕಾಂ ನ ಸುಮಾರು 110 ವಿದ್ಯಾರ್ಥಿಗಳು ಭಾಗಿಯಾಗಿದ್ದು ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು.

ತ್ರಿಶಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರ್ವಹಿಸಿದರು.