ಗಂಡು ಮಗುವಿನ ವ್ಯಾಮೋಹಕ್ಕೆ ಒಂದು ವರ್ಷದ ಹೆಣ್ಣು ಮಗಳಿಗೇ ವಿಷ ನೀಡಿದ ತಂದೆ!

ತ್ರಿಪುರಾದ ಖೋವಾಯ್ ಜಿಲ್ಲೆಯ ಬೆಹಲಬರಿ ಗ್ರಾಮದಲ್ಲಿ ಗಂಡು ಮಗುವಿನ ಮೋಹದಿಂದ ತಂದೆಯೊಬ್ಬ ಒಂದು ವರ್ಷದ ಮುದ್ದಾದ ಪುಟ್ಟ ಹೆಣ್ಣು ಮಗುವಿಗೆ ವಿಷ ಉಣಿಸಿ ಜೀವ ಬಲಿಪಡೆದಿರುವ ಪೈಶಾಚಿಕ ಘಟನೆ ನಡೆದಿದೆ.

ಮಗುವನ್ನು ಕೊಂದ ಆರೋಪಿಯನ್ನು ತ್ರಿಪುರಾ ಸ್ಟೇಟ್‌ ರೈಫಲ್ಸ್‌ನ 10 ನೇ ಬೆಟಾಲಿಯನ್‌ನ ರತೀಂದ್ರ ದೇಬ್ಬರ್ಮಾ ಎಂದು ಗುರುತಿಸಲಾಗಿದೆ.

ಪ್ರಸ್ತುತ ಈತ ಎಡಿಸಿ ಖುಮುಲ್ವ್ಂಗ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯವು ಆತನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಈತ ಅವಿದ್ಯಾವಂತ ಅಲ್ಲ, ಸುಶಿಕ್ಷಿತ ಸರ್ಕಾರಿ ಉದ್ಯೋಗಿ, ತ್ರಿಪುರ ರಾಜ್ಯ ರೈಫಲ್ಸ್‌ನಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ. ಹೀಗಿದ್ದೂ ಆತನ ಪುತ್ರ ಬೇಕು ಎಂಬ ಬಯಕೆಗೆ 1 ವರ್ಷದ ಮಗಳನ್ನು ಕೊಂದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈಗ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ.

ಮಗುವನ್ನು ಕೂಡಲೇ ಮನೆಯವರು ಮೊದಲು ಖೋವಾಯ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಲ್ಲಿಂದ ರಾಜ್ಯ ರಾಜಧಾನಿ ಅಗರ್ತಲಾದ ಜಿಬಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಗಾಗಿ ವೈದ್ಯರು ಶವವನ್ನು ಶವಾಗಾರದಲ್ಲಿ ಇರಿಸಿದ್ದಾರೆ.

ಬಿಸ್ಕೆಟ್‌ ಕೊಡಿಸುವ ನೆಪದಲ್ಲಿ ವಿಷ ನೀಡಿದ ತಂದೆ:
ಬಿಸ್ಕತ್ತು ಖರೀದಿಸುವ ನೆಪದಲ್ಲಿ ತನ್ನ ಪತಿ ತನ್ನ ಹೆಣ್ಣು ಮಗಳು ಸುಹಾನಿ ದೇಬ್ಬರ್ಮಾಗೆ ವಿಷ ಕುಡಿಸಿದ್ದಾನೆ ಎಂದು ಮಗುವಿನ ತಾಯಿ ಮಿತಾಲಿ ದೇಬ್ಬರ್ಮಾ ಆರೋಪಿಸಿದ್ದಾರೆ. ತನ್ನ ಪತಿ ಯಾವಾಗಲೂ ಗಂಡು ಮಗು ಬೇಕು ಎನ್ನುತ್ತಿದ್ದ. ಸರದಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ನನ್ನ ಮೇಲೆ ಕೋಪಗೊಂಡಿದ್ದ ಆತ ತನಗೆ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಮಿತಾಲಿ ದೇಬ್ಬರ್ಮಾ ಹೇಳಿದ್ದಾರೆ.

ನಾವು ಬೆಹಲಬರಿಯಲ್ಲಿರುವ ನನ್ನ ಸಹೋದರಿಯ ಮನೆಗೆ ಭೇಟಿ ನೀಡಿದ್ದೆವು. ಈ ವೇಳೆ ನನ್ನ ಗಂಡ ನಮ್ಮ ಮಗಳನ್ನು ಮತ್ತು ನನ್ನ ಸಹೋದರಿಯ ಮಗನನ್ನು ಹತ್ತಿರದ ಅಂಗಡಿಗೆ ಬಿಸ್ಕತ್ತು ಖರೀದಿಸಲು ಕರೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ, ನನ್ನ ಸಹೋದರಿ ನನ್ನ ಮಗಳು ವಾಂತಿ ಮಾಡಿಕೊಳ್ಳುವುದನ್ನು ಮತ್ತು ಭೇದಿಯಿಂದ ಬಳಲುತ್ತಿರುವುದನ್ನು ಗಮನಿಸಿದರು. ಅವಳ ಬಾಯಿಯಿಂದ ಬಲವಾದ ಔಷಧದ ವಾಸನೆ ಬರುತ್ತಿತ್ತು. ನಾನು ಅವನನ್ನು ಈ ಬಗ್ಗೆ ಪ್ರಶ್ನಿಸಿ, ಅವಳಿಗೆ ಇಷ್ಟೊಂದು ಅಸ್ವಸ್ಥನಾಗಲು ಅವನು ಏನು ಕೊಟ್ಟಿದ್ದೀರಾ ಎಂದು ಕೇಳಿದೆ. ಆದರೆ ಅವನು ತಾನು ಅವಳಿಗೆ ಯಾವುದೇ ವಿಷ ನೀಡಲಿಲ್ಲ ಎಂದು ಹೇಳಿದ. ಈಗ ನನ್ನ ಮಗಳು ಸುಹಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಮಿತಾಲಿ ಅಳಲು ತೋಡಿಕೊಂಡಿದ್ದಾರೆ. ನನ್ನ ಇಬ್ಬರು ಹೆಣ್ಣುಮಕ್ಕಳಲ್ಲಿ ಸುಹಾನಿ ಕಿರಿಯವಳು, ಆಕೆಯನ್ನು ಕೊಂದ ಆತನಿಗೆ ಮರಣದಂಡನೆ ವಿಧಿಸಬೇಕೆಂದು ಮಗುವಿನ ತಾಯಿ ಒತ್ತಾಯಿಸಿದ್ದಾರೆ.