ಉಡುಪಿ: ಪದ್ಮನಾಭ ಬಾಲಕೃಷ್ಣ ಆಚಾರ್ಯ ಇವರು ಉಡುಪಿ ಯಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿ ರಾಜಕೀಯ ಜೀವನದಲ್ಲಿ ಮುಂದೆ ಸಾಗಿ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ತ್ರಿಪುರ, ಅರುಣಾಚಲ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸಂಘ ಪರಿವಾರ ಹಾಗೂ ಬಿಜೆಪಿಯ ಹಿರಿಯ ನಾಯಕ ಪದ್ಮನಾಭ ಬಾಲಕೃಷ್ಣ ಆಚಾರ್ಯರಿಗೆ ಉಡುಪಿ ತೆಂಕಪೇಟೆಯ ಆಚಾರ್ಯ ಮಠದಲ್ಲಿ ಬುಧವಾರ ನುಡಿನಮನ ಸಲ್ಲಿಸಲಾಯಿತು.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಕಳುಹಿಸಿದ ಶ್ರದ್ಧಾಂಜಲಿ ಸಂದೇಶ ವಾಚಿಸಿದ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಮಾತನಾಡಿ, ಪೂರ್ವಾಂಚಲ ಮತ್ತು ಮುಂಬೈ, ದಕ್ಷಿಣ ಭಾರತದ ನಡುವೆ ವಿದ್ಯಾರ್ಥಿಗಳ ವಿನಿಮಯದ ಮೂಲಕ ಸಾಂಸ್ಕೃತಿಕ ಅಧ್ಯಯನಕ್ಕೆ ಪ್ರೇರಣೆ ನೀಡಿದ್ದ ಪಿ. ಬಿ. ಆಚಾರ್ಯರು ಪೂರ್ವಾಂಚಲ ರಾಜ್ಯಗಳ ಗರಿಷ್ಠ ಸಂಪರ್ಕ ಹೊಂದಿದ್ದು, ಸರಳ ಜೀವನ ನಡೆಸುತ್ತಿದ್ದರು. ಭಾರತ ವಿಶ್ವಗುರುವಾಗಬೇಕೆನ್ನುವ ಪಿ. ಬಿ. ಆಚಾರ್ಯರ ಕನಸು ನನಸಾಗಲಿ ಎಂದು ಹಾರೈಸಿದರು.
ಉದ್ಯಮಿ ವಿಶ್ವನಾಥ ಶೆಣೈ ಮಾತನಾಡಿ, ತನಗಾಗಿ ಬದುಕದೆ ಅನ್ಯರಿಗಾಗಿ ಬದುಕುವುದರಿಂದ ಜೀವನ ಸಾರ್ಥಕ್ಯ ಹೊಂದುತ್ತದೆ ಎಂದರು.
ಗುರುನಾಥ ರಾವ್ ಮಾತನಾಡಿ, ವಾರ್ಷಿಕ ಗುರುಪೂಜೆ ತಪ್ಪಿಸದ ಪಿ. ಬಿ. ಆಚಾರ್ಯರು ರಾಜಭವನ ಸಿಬ್ಬಂದಿ ಬಗ್ಗೆ ಅಪರಿಮಿತ ಕಾಳಜಿ ಹೊಂದಿದ್ದರು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ನೆಲೆಯಲ್ಲಿ ಬಾಳಿ ಬದುಕಿದ್ದರು ಎಂದರು.
ಆಚಾರ್ಯ ಮಠದ ರಘುರಾಮ ಆಚಾರ್ಯ ಮಾತನಾಡಿ ಜಿ ಎಸ್ ಬಿ ಸಮಾಜಕ್ಕೆ ಅವರ ಕೊಡುಗೆ ಅಪಾರ. ಉನ್ನತ ಹುದ್ದೆಯಲ್ಲಿದ್ದರೂ ಸಾಮಾನ್ಯರಂತೆ ಬದುಕಿ ಬಾಳಿದ್ದರು ಎಂದರು.
ಆಚಾರ್ಯರು ಉಡುಗೊರೆಯಾಗಿ ನೀಡಿರುವ ವಸ್ತುಗಳನ್ನು ಅವರ ಭಾವಚಿತ್ರದೊಂದಿಗೆ ಇಟ್ಟು ನುಡಿ ನಮನ ಸಲ್ಲಿಸಲಾಯಿತು.
ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿ ಮಾತನಾಡಿ, ಈಶಾನ್ಯ ರಾಜ್ಯಗಳ ಅಭಿವೃದ್ಧಿಯಾಗದಿದ್ದರೆ ಕೈ ತಪ್ಪುವ ಆತಂಕವನ್ನು ಪಿ. ಬಿ. ಆಚಾರ್ಯ ಹೊಂದಿದ್ದರು. ಮಠಾಧೀಶರು, ಬ್ಯಾಂಕುಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳಿಗಾಗಿ ಶಾಖೆ ತೆರೆಯುವಂತೆ ಮನವಿ ಮಾಡುತ್ತಿದ್ದರು. ಅಸ್ಸಾಂ, ಅರುಣಾಚಲದಲ್ಲಿ ಪೇಜಾವರ ಮಠದ ಧ್ಯಾನಮಂದಿರ, ಸೇವಾ ಚಟುವಟಿಕೆಗಳಿಗೆ ಜಾಗಕ್ಕಾಗಿ ಪತ್ರ ಬರೆದಿದ್ದರು. ಊರ ಅಭಿಮಾನ, ದೇಶಕ್ಕಾಗಿ ತುಡಿತವಿದ್ದ ಪಿ. ಬಿ. ಆಚಾರ್ಯರೊಬ್ಬ ಅದ್ಭುತ ಸ್ವಯಂ ಸೇವಕ ಎಂದು ಅವರ ವ್ಯಕ್ತಿತ್ವ ಪರಿಚಯ ನೀಡಿದರು.