ಉಡುಪಿ: ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನ ಹೊಂದಿದ್ದು, ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ಅವರು ಇಂದು ಬನ್ನಂಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ), ಹಿರಿಯ ನಾಗರಿಕರ ಸಂಸ್ಥೆ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ(ರಿ), ವೃದ್ಧಾಶ್ರಮಗಳು ಹಾಗೂ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು 2 ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯ ಉಪ ಯೋಜನೆಯಡಿ ಅಂತರ್ -ಪೀಳಿಗೆಯ ಬಾಂಧವ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಸೇವೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಬೇಕಾಗಿದೆ. ತಮಗೆ ಪ್ರಾಯವಾಗಿದೆ ತಾವು ಅಪ್ರಯೋಜಕರು ಎಂದು ತಿಳಿಯದೆ ತಮ್ಮ ಆರೋಗ್ಯ ಸದೃಢವಾಗಿರುವವರೆಗೆ ಹಿರಿಯ ನಾಗರಿಕರು ಒಂದಲ್ಲ ಒಂದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಿರಿಯರು ಕೂಡ ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಈ ಬಗ್ಗೆ ಕಿರಿಯ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ಹೆತ್ತವರನ್ನು ತ್ಯಜಿಸುವ ಘಟನೆಗಳು ನಡೆಯುತ್ತಿರುವುದು ಆಘಾತಕಾರಿಯಾದ ವಿಷಯವಾಗಿದೆ. ಈ ಬಗ್ಗೆ ಸಮಾಜ ಚಿಂತನೆ ನಡೆಸಬೇಕು. ಯುವಕರಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಕೌಟುಂಬಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಿರಿಯರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಭಾರತೀಯ ಪರಂಪರೆಯು “ವಸುದೈವ ಕುಟುಂಬಕo” ಎನ್ನುವ ಧ್ಯೇಯ ವಾಕ್ಯದಲ್ಲಿ ನಂಬಿಕೆ ಇಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದ್ದು ಹಿರಿಯ ನಾಗರಿಕರು ಅನಾದರಕ್ಕೆ ಒಳಗಾಗುತ್ತಿದ್ದಾರೆ. ತಾವು ಕಷ್ಟಪಟ್ಟು ಸಾಕಿದ ಮಕ್ಕಳೇ ಹೆತ್ತವರನ್ನು ಕಡೆಗಣಿಸುವ ಘಟನೆಗಳು ಕಂಡು ಬರುತ್ತಿದ್ದು, ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಬಗ್ಗೆ ಕಿರಿಯ ನಾಗರಿಕರಿಗೆ ಆಪ್ತ ಸಮಾಲೋಚನೆ ನೀಡುವ ಅಗತ್ಯವಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಮಾತನಾಡಿ, ನಗರೀಕರಣದಿಂದಾಗಿ ಹಿರಿಯ ನಾಗರಿಕರು ಮಕ್ಕಳು, ಕುಟುಂಬಿಕರು, ಬಂದು ಬಾಂಧವರಿಲ್ಲದೆ ಒಂಟಿಯಾಗಿ ಬದುಕುತ್ತಿದ್ದು ಇವರಿಗೆ ಅಭದ್ರತೆ ಕಾಡುತ್ತಿರುವುದನ್ನು ಮನಗಂಡು ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರ ಆದೇಶದ ಮೇರೆಗೆ ಪೊಲೀಸ್ ಬೀಟ್ ನಡೆಸಿ ಹಿರಿಯ ನಾಗರಿಕರ ಮಾಹಿತಿ ಕಲೆ ಹಾಕಿ ಅವರ ಮನೆಗೆ ತೆರಳಿ ಅವರಿಗೇನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಮೂಲಕ ಅದನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 1184 ಹಿರಿಯ ನಾಗರಿಕರನ್ನು ಗುರುತಿಸಿ ಅವರ ಮನೆಗಳಿಗೆ ನಿಯಮಿತ ಭೇಟಿ ನೀಡಲಾಗುತ್ತಿದೆ. ಒಂಟಿಯಾಗಿರುವ ಹಿರಿಯ ನಾಗರಿಕರು ಭಯಪಡಬೇಕಾಗಿಲ್ಲ ಇಲಾಖೆ ಅವರ ಬೆಂಬಲಕ್ಕೆ ಇದೆ ಎಂದರು.
ಇಂಚರ ಕ್ಲಿನಿಕ್‌ನ ಜನರಲ್ ಫಿಸಿಶಿಯನ್ ಡಾ.ವೈ.ಸುದರ್ಶನ್ ರಾವ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಿರಿಯ ನಾಗರಿಕರಲ್ಲಿ ಅನುಭವದಿಂದ ಪಡೆದ ಜ್ಞಾನ ಮತ್ತು ನಿವೃತ್ತ ಜೀವನದ ಸಮಯ ಇರುತ್ತದೆ. ಅವರ ಜ್ಞಾನ ಮತ್ತು ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಕಾಣಿಕೆ ನೀಡಬೇಕು. ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಅವರಿಗೆ ಒಂಟಿತನ ಕಾಡದಂತೆ ಅವರ ಜೊತೆ ಕುಟುಂಬಸ್ಥರು ಸಮಯ ಕಳೆಯಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಹಿರಿಯ ನಾಗರಿಕರ ಅನುಭವ ಮತ್ತು ಜ್ಞಾನವನ್ನು ತಿಳಿಸುವ ಕೆಲಸ ಆಗಬೇಕು. ನಮ್ಮ ಹಿಂದಿನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮೂಲಕ ಯುವ ಪೀಳಿಗೆಗೆ ಅದನ್ನು ಮುಂದುವರೆಸಿಕೊoಡು ಹೋಗುವಂತೆ ನೋಡಿಕೊಳ್ಳುವುದರಲ್ಲಿ ಅವರ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಆರೋಗ್ಯ ಇಲಾಖೆ ವತಿಯಿಂದ ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಬಿ, ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಟಿ. ಎಸ್.ಎನ್ ಪೂರ್ಣಾನಂದ, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ. ಸದಾನಂದ ಹೆಗಡೆ, ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್, ಹಿರಿಯ ನಾಗರಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಮೂರ್ತಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿ, ಹೆಚ್ ರವೀಂದ್ರ ಮತ್ತು ಕಾಂತಿ ಹರೀಶ್ ನಿರೂಪಿಸಿ, ಯೋಜನಾ ಸಹಾಯಕ ಶಿವಾಜಿ ವಂದಿಸಿದರು.















