ನಾಳೆ (ಸೆ. 29) ಕರ್ನಾಟಕ ಬಂದ್: ಸಾರಿಗೆ ಸಂಚಾರ ಅಸ್ತವ್ಯಸ್ತ ಸಾಧ್ಯತೆ; ಅಗತ್ಯ ಸೇವೆಗಳು ಅಬಾಧಿತ

ಬೆಂಗಳೂರು: ರಾಜ್ಯದ ಜನರು ನೀರಿಗಾಗಿ ತತ್ತರಿಸುತ್ತಿರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 29 ಶುಕ್ರವಾರ) ಕರೆ ನೀಡಿರುವ ಕರ್ನಾಟಕ ಬಂದ್‌ ಗೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್‌ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದೆ ಬಂದು ಬೆಂಬಲ ಸೂಚಿಸಿವೆ. ರಾಜ್ಯದ ನಾನಾ ಭಾಗಗಳಲ್ಲಿರುವ ಸ್ಥಳೀಯ ಸಂಘಟನೆಗಳು ಕೂಡಾ ಜೈಜೋಡಿಸಿವೆ.

ಕರ್ನಾಟಕ ಬಂದ್​ಗೆ ನೈತಿಕ ಬೆಂಬಲ ನೀಡಲು ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಾಬ್ದಾರಿಯನ್ನು ಆಯಾ ಆಡಳಿತ ಮಂಡಳಿ ತಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ರಜೆ ನೀಡುವ ಬಗ್ಗೆ ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.

ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಬಂದ್ ಬೆಂಬಲಿಸಿ ನಾಳೆ ಹೆದ್ದಾರಿ, ರೈಲು ತಡೆದು ಚಳವಳಿ ನಡೆಸಲಾಗುವುದು ಎಂದು ಮಂಡ್ಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹಾಗೂ ರೈಲು ತಡೆಗೆ ನಿರ್ಧಾರ ಮಾಡಲಾಗಿದೆ.

ಬಹುತೇಕ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದರೆ, ಕಬ್ಬು ಬೆಳೆಗಾರರ ಸಮಿತಿ, ಕರವೇ ನಾರಾಯಣ ಗೌಡರ ಬಣ ಬೆಂಬಲ ನೀಡಿಲ್ಲ.

ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಸಂಘ, ಖಾಸಗಿ ಸಾರಿಗೆ ಸಂಘಟನೆ, ಬಿಬಿಎಂಪಿ ನೌಕರರ ಸಂಘ, ಶಾಲಾ ಸಂಘಟನೆಗಳಾದ ರುಪ್ಸಾ, ಕ್ಯಾಮ್ಸ್ ಬಾರ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ನೈತಿಕ ಬೆಂಬಲ ನೀಡಿದ್ದರೆ ರಾಜ್ಯ ವಿದ್ಯಾರ್ಥಿಗಳ ಪೋಷಕ ಸಂಘಟನೆ ಒಕ್ಕೂಟ, ಜಲ ಸಂರಕ್ಷಣಾ ಸಮಿತಿ, ಹೋಟೆಲ್ ಅಸೋಸಿಯೇಶನ್ ಇನ್ನೂ ನಿರ್ಧಾರ ಪ್ರಕಟಿಸಿಲ್ಲ

ಅಗತ್ಯ ಸೇವೆಗಳಾದ ಮೆಡಿಕಲ್, ಆಸ್ಪತ್ರೆ, ಆಂಬ್ಯುಲೆನ್ಸ್, ಹಾಲಿನ ಬೂತ್ ಗಳು ನಾಳೆ ಎಂದಿನಂತೆ ತೆರೆದಿರುತ್ತವೆ.