ಮುಷ್ಕರ ಹಿಂಪಡೆಯಲು‌ ಸಾರಿಗೆ ನೌಕರರು ನಿರ್ಧಾರ: ಮಧ್ಯಾಹ್ನ ಸರ್ಕಾರಿ ಬಸ್ ಗಳು ರಸ್ತೆಗಿಳಿಯುವ ಸಾಧ್ಯತೆ

ಬೆಂಗಳೂರು: ದಿಢೀರ್ ನಡೆದ ಬೆಳವಣಿಗೆಯಿಂದಾಗಿ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಹಿಂಪಡೆಯಲು ನಿರ್ಧರಿಸಿದ್ದಾರೆ. ಅಧಿಕೃತ ಘೋಷಣೆ ಮಾಡಲು ಮಾತ್ರ ಬಾಕಿ ಇದೆ.

ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಭಾನುವಾರ ಸಂಜೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಸಹಿತ ಇತರ ಸಚಿವರೊಂದಿಗೆ ಸಾರಿಗೆ ನೌಕರರ ಮುಖಂಡರು ನಡೆಸಿದ ಸಭೆ ವಿಫಲಗೊಂಡಿತ್ತು.

ಅಲ್ಲದೆ, ಸೋಮವಾರ ಕೂಡ ಮುಷ್ಕರ ಮುಂದುವರಿಸುತ್ತೇವೆ ಎಂದು ಸಾರಿಗೆ ನೌಕರರ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದರು. ಆದರೆ ಇಂದು ನಡೆದ ದಿಢೀರ್ ಬೆಳವಣಿಗೆಯಿಂದ ಸಾರಿಗೆ ನೌಕರರು ಇಂದು ತಮ್ಮ ಮುಷ್ಕರವನ್ನ ಹಿಂಪಡೆಯಲು ಮುಂದಾಗಿದ್ದಾರೆ. ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಅಲೋಚನೆ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಚರ್ಚೆ ಮಾಡಿ ಈ ಕುರಿತು ಅಂತಿಮ ನಿರ್ಧಾರ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮುಷ್ಕರದಿಂದ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಚಿಂತನೆ ಮಾಡಿದ್ದೇವೆ. ಫ್ರೀಡಂಪಾರ್ಕ್​​​​ನಲ್ಲಿ ನಡಿಯೋ ಉಪವಾಸ ಸತ್ಯಾಗ್ರಹದ ವೇಳೆ ಸಾರಿಗೆ ನೌಕರರ ನಾಯಕರೊಂದಿಗೆ ಮಾತನಾಡುತ್ತೇವೆ. ನಿನ್ನೆ ನಡೆದ ಬೆಳವಣಿಗೆಗಳಲ್ಲಿ ಭಾರೀ ಗೊಂದಲ ಉಂಟಾಗಿದ್ದು, ಇಂದು ಮುಷ್ಕರ ಅಂತಿಮ ಘಟಕ್ಕೆ ಬಂದಿದೆ.

ಸರ್ಕಾರದ ನಿಲುವು ಏನೇ ಇದ್ದರೂ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಚಿಂತನೆ ಮಾಡಿದ್ದೇವೆ. ಕಳೆದ ಎರಡ್ಮೂರು ದಿನಗಳಿಂದ ಜನರ ಸಮಸ್ಯೆ ನಮಗೆ ಅರ್ಥ ಆಗಿದೆ. ನಮ್ಮ ತೀರ್ಮಾನವನ್ನು ಫ್ರೀಡಂಪಾರ್ಕ್​​​ನಲ್ಲೇ ಘೋಷಣೆ ಮಾಡುತ್ತೇವೆ ಎಂದರು.