ತರಬೇತಿಯಿಂದ ಪರಿಪೂರ್ಣತೆ: ಎಸ್.ಟಿ ಸಿದ್ದಲಿಂಗಪ್ಪ

ಉಡುಪಿ: ತರಬೇತಿಯು ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಜ್ಞಾನ, ಕೌಶಲ್ಯತೆ ಹಾಗೂ ಅತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಯಾವುದೇ ಉದ್ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ತರಬೇತಿಯು ಅತೀ ಅಗತ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ಧಲಿಂಗಪ್ಪ ಹೇಳಿದರು.

ಅವರು ಗುರುವಾರ, ಮಲ್ಪೆಯ ಸಿ.ಎಸ್.ಪಿ ಕೇಂದ್ರ ಕಚೇರಿಯಲ್ಲಿ, ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 2 ನೇ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ಈಜು ತರಬೇತಿ, ಪ್ರಥಮ ಚಿಕಿತ್ಸೆ, ಸಮುದ್ರ ಈಜು ತರಬೇತಿ ಮತ್ತು ಒಳಾಂಗಣ ತರಬೇತಿಯು ಸಿ.ಎಸ್.ಪಿ ಘಟಕದ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲ್ಪೆ ಟೆಗ್ಮಾ ಕೊಚ್ಚಿನ್ ಶಿಫ್‌ಯಾರ್ಡ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರಿಕುಮಾರ್ ಮಾತನಾಡಿ, ಯಾವುದೇ ಉದ್ಯೋಗದಲ್ಲಿ ತರಬೇತಿಯು ಅತೀ ಅಗತ್ಯವಾಗಿದ್ದು, ತರಬೇತಿಯು ತುರ್ತು ಸಮಯದಲ್ಲಿ ಸಾರ್ವಜನಿಕರ ಜೀವ ಮತ್ತು ಸ್ವತ್ತು ರಕ್ಷಣೆಗೆ ಅನುಕೂಲವಾಗಲಿದೆ ಎಂದರು.

ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಸಿ.ಎಸ್.ಪಿ ಕೇಂದ್ರ ಕಚೇರಿಯ ಡಿವೈಎಸ್‌ಪಿ ಟಿ.ಎಸ್ ಸುಲ್ಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿ.ಎಸ್.ಪಿ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿ, ನಿಸ್ತಂತು ವಿಭಾಗದ ಪಿ.ಎಸ್.ಐ ಮನಮೋಹನ ರಾವ್ ನಿರೂಪಿಸಿ, ಪಿ.ಐ ಕರುಣಾಸಾಗರ ವಂದಿಸಿದರು.

25 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು, ಇವರಿಗೆ 2 ವಾರಗಳ ಕಾಲ ತರಬೇತಿ ನಡೆಯಲಿದೆ.