‘ಟ್ರೈನ್‌ 18’ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಹೆಸರು

ನವದೆಹಲಿ: ದೇಶಿಯ ತಂತ್ರಜ್ಞಾನ ವ್ಯವಸ್ಥೆಯಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ರವಿವಾರ ಈ ಮಾಹಿತಿ ತಿಳಿಸಿದ್ದಾರೆ.

ಈ ರೈಲು ನಿರ್ಮಾಣ ಆರಂಭಿಸಿದಾಗ ‘ಟ್ರೈನ್‌ 18’ ಎಂದು ಹೆಸರಿಡಲಾಗಿತ್ತು. ಬಳಿಕ ಇದಕ್ಕೆ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಅಂತಿಮವಾಗಿ  ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ನಿಗದಿಪಡಿಸಲಾಯಿತು. ಇದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನರಿಗೆ ನೀಡುತ್ತಿರುವ ಕೊಡುಗೆಯಾಗಿದೆ ಎಂದರು.

ದೆಹಲಿಯಿಂದ ವಾರಾಣಸಿಗೆ ಸಂಚರಿಸುವ ಸಾಮರ್ಥ್ಯ ಇರುವ ಈ ರೈಲನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶೀಘ್ರದಲ್ಲಿ ಉದ್ಘಾಟಿಸಲಿದ್ದಾರೆ.

 ‘ಟ್ರೈನ್‌ 18’ ಪ್ರಯಾಣ ದರ ಶತಾಬ್ದಿ ಎಕ್ಸ್‌ಪ್ರೆಸ್‌ಗಳಿಗೆ ಹೋಲಿಕೆ ಮಾಡಿದರೆ ಶೇ. 40-ಶೇ.50 ಹೆಚ್ಚಾಗುವ ಸಾಧ್ಯತೆ ಇದೆ. ಎಕ್ಸಿಕ್ಯೂಟಿವ್‌ ಕ್ಲಾಸ್‌ನ ಟಿಕೆಟ್ ದರ 2,800 ರೂ.ಗಳಿಂದ 2,900 ರೂ. ಮತ್ತು ಚೇರ್‌ ಕಾರ್‌ನ ದರ 1,600 ರೂ. ಗಳಿಂದ 1,700 ರೂ. ಆಗಿರಲಿದೆ. 

16 ಬೋಗಿಗಳ ಈ ರೈಲನ್ನು ರೂ.97 ಕೋಟಿ ವೆಚ್ಚದಲ್ಲಿ, 18 ತಿಂಗಳಲ್ಲಿ ಸಿದ್ಧಪ‍ಡಿಸಲಾಗಿದೆ. ಸಂಪೂರ್ಣವಾಗಿ ಭಾರತೀಯ ಎಂಜಿನಿಯರ್‌ಗಳೇ ಇದನ್ನು ನಿರ್ಮಿಸಿದ್ದಾರೆ.