ಮದುವೆಯಾಗಬೇಕಿದ್ದ SBI ಉದ್ಯೋಗಿಗಳ ದುರಂತ ಅಂತ್ಯ: ಇಬ್ಬರೂ ಆತ್ಮಹತ್ಯೆಗೆ ಶರಣು

ಮೈಸೂರು: ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ ಎಸ್‌ಬಿಐ ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಕೇರಳದಲ್ಲಿ ನಡೆದಿದೆ. ಪ್ರೀತಿಸಿ, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆಗೆ ಸಿದ್ಧವಾಗಿದ್ದ ಜೋಡಿಯ ದುರಂತ ಅಂತ್ಯ ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.

ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಮೃತ ಯುವತಿ. ಇತ್ತೀಚೆಗಷ್ಟೇ ಎಸ್‌ಬಿಐ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದ ಅನುಶ್ರೀ, ತರಬೇತಿ ಸಂದರ್ಭದಲ್ಲಿ ಕೇರಳದ ಎರ್ನಾಕುಲಂನ ಎಸ್‌ಬಿಐನಲ್ಲಿ ಕೆಲಸ ಮಾಡುತ್ತಿದ್ದ ಇರಿಟ್ಟಿ ಮೂಲದ ಅಮಲ್ ಎಂಬ ಯುವಕನ ಪರಿಚಯವಾಗಿತ್ತು.

ಪರಿಚಯ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಈ ವಿಚಾರ ಎರಡೂ ಕುಟುಂಬಗಳಿಗೂ ತಿಳಿದಿದ್ದು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಡಿಸೆಂಬರ್‌ನಲ್ಲಿ ಮದುವೆ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ, ಮದುವೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಇಬ್ಬರ ಬದುಕು ದುರಂತದಲ್ಲಿ ಅಂತ್ಯವಾಗಿದೆ.

ಅನುಶ್ರೀ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೂ ಮುನ್ನ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು ಎನ್ನಲಾಗಿದೆ. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅನುಶ್ರೀ ಹಾಗೂ ಅಮಲ್ ನಡುವೆ ದೂರವಾಣಿಯಲ್ಲಿ ಜಗಳ ನಡೆದಿತ್ತು ಎನ್ನಲಾಗಿದ್ದು, ಇದೇ ವಿಚಾರದಿಂದ ಅನುಶ್ರೀ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಅನುಶ್ರೀ ಸಾವಿನ ಸುದ್ದಿ ತಿಳಿದ ಬಳಿಕ ಅಮಲ್ ಕೂಡ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ಬಳಿಕ ಕೇರಳದ ಇರಿಟ್ಟಿ ನಗರದ ಲಾಡ್ಜ್‌ವೊಂದರಲ್ಲಿ ಕೊಠಡಿ ಪಡೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೋಡಿಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.