ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ; ಅಂಚೆ ಕಚೇರಿಯಲ್ಲಿ ದಂಡ ಪಾವತಿಸುವ ಸೌಲಭ್ಯ

ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಲಾದ ಸಂಚಾರ ದಂಡವನ್ನು ಕರ್ನಾಟಕದಾದ್ಯಂತ ಅಂಚೆ ಕಚೇರಿಗಳಲ್ಲಿ ಪಾವತಿಸಲು ಅನುಕೂಲವಾಗುವಂತೆ ಮಂಗಳೂರು ನಗರ ಪೊಲೀಸ್ ಮತ್ತು ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿವೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಮಂಗಳೂರು ಅಂಚೆ ವಿಭಾಗದ ಅಂಚೆ ಕಛೇರಿಗಳ ಹಿರಿಯ ಅಧೀಕ್ಷಕ ಎನ್.ಶ್ರೀಹರ್ಷ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಶಿಕುಮಾರ್, ಇಲಾಖೆಯು ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ಕಮಿಷನರೇಟ್‌ನಾದ್ಯಂತ ಸುಮಾರು ನೂರು ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ. ಇದು ಹೆಚ್ಚಿನ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ನಗರ ಮತ್ತು ರಾಜ್ಯದಾದ್ಯಂತ ಅಂಚೆ ಕಚೇರಿಗಳು ಇರುವುದರಿಂದ ಸಂಚಾರ ದಂಡವನ್ನು ಪಾವತಿಸುವುದು ಸುಲಭವಾಗಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಸಂಚಾರ ದಂಡವನ್ನು ಆನ್‌ಲೈನ್‌ನಲ್ಲಿ ನಾಲ್ಕು ಸಂಚಾರ ಪೊಲೀಸ್ ಠಾಣೆಗಳು ಮತ್ತು ನಾಲ್ಕು ಮಂಗಳೂರು ಒನ್ ಕೇಂದ್ರಗಳಲ್ಲಿ ಪಾವತಿಸಬಹುದು. ಹೊಸ ವ್ಯವಸ್ಥೆಯೊಂದಿಗೆ, ಮಂಗಳೂರು ಮಾತ್ರವಲ್ಲದೆ ಕರ್ನಾಟಕದಾದ್ಯಂತ ಯಾವುದೇ ಅಂಚೆ ಕಚೇರಿ ಅಥವಾ ಉಪ ಅಂಚೆ ಕಚೇರಿಯಲ್ಲಿ ದಂಡವನ್ನು ಪಾವತಿಸಬಹುದು ಎಂದು ಶ್ರೀಹರ್ಷ ಹೇಳಿದರು.

1,000 ರೂ ವರೆಗಿನ ದಂಡಕ್ಕೆ 10 ರೂ, 2,500 ರೂ ವರೆಗೆ 15 ರೂ, 5,000ರೂ ವರೆಗೆ 20 ರೂ ಮತ್ತು 5,000 ರೂ ವರೆಗಿನ ದಂಡಕ್ಕೆ 25 ರೂ ಸೇವಾ ಶುಲ್ಕವನ್ನು ಅಂಚೆ ಕಚೇರಿಗಳಲ್ಲಿ ಪಾವತಿಸಬೇಕಾಗುತ್ತದೆ.ಈ ಸೇವೆಯು ತಕ್ಷಣವೇ ಜಾರಿಗೆ ಬರುವಂತೆ ಕರ್ನಾಟಕದ 1,702 ಅಂಚೆ ಕಚೇರಿಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ತಿಳಿಸಿದರು.