ಕಾರ್ಕಳದ ಪ್ರವಾಸೋದ್ಯಮಕ್ಕೆ ಮುನಿಯಾಲು ಉದಯ ಶೆಟ್ಟಿ ಬಣದಿಂದ ಧಕ್ಕೆ: ಮಹಾವೀರ ಹೆಗ್ಡೆ

ಕಾರ್ಕಳ: ಕಾರ್ಕಳ ಕ್ಷೇತ್ರದ ಹಿತ ಕಾಪಾಡುತ್ತೇನೆ ಎಂದು ಚುನಾವಣೆ ಸಂದರ್ಭ ಹೇಳಿದ್ದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಇದೀಗ ಕಾರ್ಕಳಕ್ಕೆ ಅಗೌರವ ತರುವ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟುಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಿಮ್ಮ ಟೀಕೆ, ನಡವಳಿಕೆಯಿಂದ ನಿಮ್ಮ ಗೌರವ ಹೆಚ್ಚಾಯಿತೇ? ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ ತೊಂದರೆ ಕೊಡುವುದು ಇತರರಿಗೆ ಹಿಂಸಿಸುವುದು ನಿಮ್ಮ ಪ್ರವೃತ್ತಿಯಾಗಿದೆ ಇದುವೇ ನಿಮ್ಮ ರಾಜಕಾರಣವೇ? ಚುನಾವಣೆ ಬಳಿಕ ಕಾರ್ಕಳದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು. ಅಭಿವೃದ್ಧಿಯನ್ನು ಅಣಕವಾಡುವುದು ಅಭಿವೃದ್ಧಿಯ ವೇಗಕ್ಕೆ ತೆಡೆಯೊಡ್ಡುವುದೇ ನಿಮ್ಮ ಸಾಧನೆ. ಮೌಲ್ಯಯುತ ರಾಜಕಾರಣ, ದ್ವೇಷರಹಿತ ರಾಜಕಾರಣಕ್ಕೆ ಸಾಕ್ಷಿಯಾಗಿದ್ದ ಕಾರ್ಕಳದಲ್ಲಿ ದ್ವೇಷದ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೀರಿ. ಮುಖ್ಯಮಂತ್ರಿಯನ್ನು ನೀಡಿದ ಹಿರಿಮೆ ಕಾರ್ಕಳಕ್ಕಿದೆ. ಅಂದಿನಿಂದ ಇಂದಿನ ತನಕವೂ ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಬೆಳವಣಿಗೆಗಳು ನಡೆದುಕೊಂಡು ಬಂದಿತ್ತು. ಆದರೆ ಇದಿಗ ನಿಮ್ಮ ಮೂಲಕ ಮತ್ತು ನಿಮ್ಮ ಬಣದ ಮೂಲಕ ನಿರಂತರವಾಗಿ ಗೊಂದಲ ಸೃಷ್ಟಿಸುವ ಕಾರ್ಯವಾಗುತ್ತಿದೆ.

ಪ್ರತಿದಿನ ಹೇಳಿಕೆ ವಿಡಿಯೋ ಬಿಡುಗಡೆ ಮೂಲಕ ಸಾಧಿಸಿದ್ದಾದರೂ ಏನು. ಚುನಾವಣೆ ಮುಗಿದ ಬಳಿಕವೂ ಆಧಾರ ರಹಿತ ಟೀಕೆಯನ್ನು ಮುಂದುವರಿಸಿಕೊಂಡು ಬಂದಿದ್ದೀರಿ. ಕಾರ್ಕಳದಲ್ಲಿ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಉದಯ ಶೆಟ್ಟಿ ಬಣದಿಂದ ಕೀಳು ಮಟ್ಟದ ರಾಜಕೀಯ ಪದೇ ಪದೇ ಸಾಬೀತಾಗುತ್ತಿದೆ. ಕಾರ್ಕಳದ ಅಭಿವೃದ್ಧಿಯ ಅಣಕ ಮಾಡುವ ಮೂಲಕ ಕಾರ್ಕಳಕ್ಕೆ ಕಳಂಕ ತರುವ ಕಾರ್ಯದಲ್ಲಿ ನಿರತರಾಗಿರುವ ಇಂತಹ ಮನಸ್ಥಿತಿಯವರ ಬಗ್ಗೆ ಕಾಂಗ್ರೆಸ್‌ನವರೇ ಎಚ್ಚರದಿಂದಿರಬೇಕು. ಇಂತಹ ನಾಟಕಗಳನ್ನು ನೈಜ ಕಾಂಗ್ರೆಸಿಗರು ಅರ್ಥ ಮಾಡಿಕೊಳ್ಳಬೇಕು.

ಶಾಸಕರಾಗಿ, ಸಚಿವರಾಗಿ ಸುನೀಲ್‌ ಕುಮಾರ್‌ ಅವರ ಕಾರ್ಯ ಸ್ಮರಣೀಯ. ಉದಯ ಶೆಟ್ಟಿ ಬಣ್ಣ ಸುನಿಲ್‌ ಕುಮಾರ್‌ ಅವರ ಜನಪ್ರಿಯತೆಯನ್ನು ಹಾಳುಗೆಡವಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಅದರ ಬದಲು ಕಾರ್ಕಳಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಚನೆ ಮಾಡುವುದು ಒಳಿತು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಕಿಡಿಕಾರಿದ್ದಾರೆ.