ಸ್ಯಾನ್ ಫ್ರಾನ್ಸಿಸ್ಕೋ: ಏಲಾನ್ ಮಸ್ಕ್ ಅವರು ಗುರುವಾರ ತಡರಾತ್ರಿ ಟ್ವಿಟರ್‌ನ 44 ಶತಕೋಟಿ ಡಾಲರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಛೇರಿಯಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ.
ಸಿಇಒ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ವಜಾಗೊಳಿಸಲಾಗಿರುವ ಟ್ವಿಟರ್ ಕಾರ್ಯನಿರ್ವಾಹಕರು.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನಕಲಿ ಖಾತೆಗಳ ಸಂಖ್ಯೆಯ ಕುರಿತು ಟ್ವಿಟರ್‌ನಲ್ಲಿನ ಉನ್ನತ ನಾಯಕತ್ವವು ತನ್ನನ್ನು ಮತ್ತು ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಮಸ್ಕ್ ಆರೋಪಿಸಿದ್ದಾರೆ.
ಒಪ್ಪಂದಕ್ಕೆ ಮುದ್ರೆ ಒತ್ತಿದಾಗ ಅಗರವಾಲ್ ಮತ್ತು ಸೆಗಲ್ ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿದ್ದರು ಮತ್ತು ಅವರನ್ನು ಹೊರಕ್ಕೆ ಕಳುಹಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಟ್ವಿಟರ್, ಮಸ್ಕ್ ಮತ್ತು ಅಧಿಕಾರಿಗಳು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ನೀಡಬೇಕಿದೆ. , ಆದಾಗ್ಯೂ, 44 ಬಿಲಿಯನ್ ಡಾಲರ್ ಒಪ್ಪಂದವನ್ನು ಪೂರ್ಣಗೊಳಿಸಿದ ಸ್ಪಷ್ಟ ಉಲ್ಲೇಖದಲ್ಲಿ “ದಿ ಬರ್ಡ್ ಈಸ್ ಫ್ರೀಡ್” ಎಂದು ಟ್ವಿಟರ್ ನ ಹೊಸ ಮಾಲೀಕ ಟ್ವೀಟ್ ಮಾಡಿದ್ದಾರೆ.
ಮಸ್ಕ್ ಮತ್ತು ಅಗರ್ವಾಲ್ ಮಧ್ಯೆ ಘರ್ಷಣೆಗಳು ಸಂಭವಿಸಿದ್ದವು. ಟ್ವಿಟರ್‌ನ ನಕಲಿ ಖಾತೆಗಳು ಕಂಪನಿಯ ಅಂದಾಜಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಮಸ್ಕ್ ಸಾರ್ವಜನಿಕವಾಗಿ ದೂರಿದ್ದರು. ಟ್ವಿಟರ್ ನ ನಿಯಂತ್ರಕ ಫೈಲಿಂಗ್‌ಗಳ ಪ್ರಕಾರ, ಜಾಲತಾಣ್ದಲ್ಲಿನ ನಕಲಿ ಖಾತೆಗಳು ಅದರ ಹಣಗಳಿಸಬಹುದಾದ ದೈನಂದಿನ ಸಕ್ರಿಯ ಬಳಕೆದಾರರಲ್ಲಿ 5% ಕ್ಕಿಂತ ಕಡಿಮೆಯಿವೆ ಎಂದಿತ್ತು. ಈ ವಿಚಾರವಾಗಿ ಮಸ್ಕ್ ಮತ್ತು ಅಗರ್ವಾಲ್ ಮಧ್ಯೆ ಜಟಾಪಟಿ ನಡೆಯುತ್ತಿತ್ತು. ಇದೀಗ ಮಸ್ಕ್ ಟ್ವಿಟರ್ ನ ಅಧಿಕೃತ ಮಾಲಕರಾಗಿರುವುದರಿಂದ ಅಗರ್ವಾಲ್ ಅವರನ್ನು ಸಂಸ್ಥೆಯಿಂದ ಹೊರಕಳಿಸಿದ್ದಾರೆ. ಅಲ್ಲದೆ, ಅಮೇರಿಕಾದ ಮಾಜಿ ಪ್ರಧಾನಿ ಡೊನಾಲ್ಡ್ ಟ್ರಂಪ್ ಅವರ ಬ್ಲಾಕ್ ಮಾಡಲಾದ ಟ್ವಿಟರ್ ಅಕೌಂಟ್ ಅನ್ನು ಪುನರ್ ಸ್ಥಾಪಿಸಲಿದ್ದಾರೆ ಎಂದು ವರದಿಯಾಗಿದೆ.