ಬೆಂಗಳೂರು: ನಾಳೆಯಿಂದ (ಆಗಸ್ಟ್ 13) ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳು ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು 2020-21ರ ಸಾಲಿಗೆ ಯಾವುದೇ ಶುಲ್ಕ ಹೆಚ್ಚಿಸುವಂತಿಲ್ಲ. ಕಳೆದ ಸಾಲಿಗಿಂತ ಕಡಿಮೆ ಶುಲ್ಕ ಪಡೆಯಲು ಆಡಳಿತ ಮಂಡಳಿಗಳಿಗೆ ಸ್ವಾತಂತ್ರ್ಯವಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಅಗತ್ಯ ಸೌಲಭ್ಯಗಳಿರುವ ಕಾಲೇಜುಗಳು ಆನ್‌ಲೈನ್ ಮೂಲಕವೇ ದಾಖಲಾತಿ ಪ್ರಕ್ರಿಯೆ ನಿರ್ವಹಿಸಬೇಕು. ಅಂಥ ವ್ಯವಸ್ಥೆ ಇಲ್ಲದ ಕಾಲೇಜುಗಳು ಅರ್ಜಿ ವಿತರಣೆ ಪ್ರಕ್ರಿಯೆಯನ್ನು ಕೋವಿಡ್-19 ತಡೆ ಸೂಚನೆಗಳಿಗೆ ಅನುಗುಣವಾಗಿ ನಿರ್ವಹಿಸಬೇಕು ಎಂದು ಸುತ್ತೋಲೆ ತಿಳಿಸಲಾಗಿದೆ.