ಕೇರಳದಲ್ಲಿ ಟೊಮೇಟೊ ಜ್ವರ ಪತ್ತೆ: ಐದು ವರ್ಷ ಕೆಳಗಿನ ಮಕ್ಕಳಲ್ಲಿ ಹೆಚ್ಚಿದ ಸೋಂಕು

ಕೊಯಂಬತ್ತೂರು: ಕೇರಳದ ಹಲವಾರು ಭಾಗಗಳಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಟೊಮೆಟೊ ಜ್ವರ ಅಥವಾ ಟೊಮೆಟೋ ಫ್ಲೂ ಎಂದು ಗುರುತಿಸಲಾಗುವ ಈ ಅಪರೂಪದ ವೈರಲ್ ಕಾಯಿಲೆಯು ಮಕ್ಕಳಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ರಾಜ್ಯದಲ್ಲಿ ಇದುವರೆಗೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ವರದಿಯ ಪ್ರಕಾರ, ಈ ಸಂಖ್ಯೆ ಮತ್ತಷ್ಟು ಏರುವ ಮುನ್ಸೂಚನೆಗಳಿವೆ.

ರೋಗ ಲಕ್ಷಣಗಳು:

# ಟೊಮೆಟೊ ಫ್ಲೂ ಪತ್ತೆ ಹಚ್ಚಲಾಗದ ಜ್ವರವಾಗಿದ್ದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
# ಜ್ವರವು ಸೋಂಕಿತ ಮಗುವಿನ ದೇಹದ ಮೇಲೆ ದದ್ದುಗಳು ಮತ್ತು ಗುಳ್ಳೆಗಳನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಕೆಂಪು ಬಣ್ಣವನ್ನು ಹೊಂದಿರುವುದರಿಂದ ಇದನ್ನು ‘ಟೊಮ್ಯಾಟೊ ಜ್ವರ’ ಎಂದು ಕರೆಯುತ್ತಾರೆ.
# ರೋಗದ ಮುಖ್ಯ ಲಕ್ಷಣಗಳೆಂದರೆ ದದ್ದುಗಳು, ಕೆಂಪು ಬಣ್ಣದ ಗುಳ್ಳೆಗಳು, ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ.
# ಇದಲ್ಲದೆ, ಸೋಂಕಿತ ಮಕ್ಕಳಲ್ಲಿ ತೀವ್ರ ಜ್ವರ, ದೇಹದಲ್ಲಿ ನೋವು, ಕೀಲು ಊತ, ಸುಸ್ತು, ಹೊಟ್ಟೆಯಲ್ಲಿ ಸೆಳೆತ, ವಾಕರಿಕೆ, ವಾಂತಿ, ಭೇದಿ, ಕೈ, ಮೊಣಕಾಲು, ಪೃಷ್ಠದ ಬಣ್ಣಬದಲಾವಣೆ, ಕೆಮ್ಮು, ಸೀನುವಿಕೆ ಮತ್ತು ನೆಗಡಿ ಇರುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು:

ಮಗುವಿಗೆ ಯಾವುದೇ ಜ್ವರ ಲಕ್ಷಣಗಳು ಕಂಡುಬಂದರೆ ವೈದ್ಯರ ಜೊತೆ ಸಮಾಲೋಚನೆಯನ್ನು ಮಾಡಬೇಕು. ಸೋಂಕಿತ ಮಗು ದದ್ದು/ಗುಳ್ಳೆಗಳನ್ನು ತುರಿಸದಂತೆ ನೋಡಿಕೊಳ್ಳಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚು ನೀರು ಕುಡಿಸುವ ಜೊತೆಗೆ ವಿಶ್ರಾಂತಿ ಮಾಡಲು ಸೂಚಿಸಬೇಕು.

ವರದಿಯ ಪ್ರಕಾರ, ರೋಗವು ವೈರಲ್, ಚಿಕೂನ್‌ಗುನ್ಯಾ ಅಥವಾ ಡೆಂಗ್ಯೂ ಜ್ವರದ ನಂತರದ ಪರಿಣಾಮವಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಕೇರಳದ ಕೆಲವು ಭಾಗಗಳಲ್ಲಿ ಮಾತ್ರ ಈ ರೋಗ ಕಂಡುಬಂದಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವೈರಸ್ ಮತ್ತಷ್ಟು ಹರಡಬಹುದು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.