ಟೊಮೇಟೋ ಜ್ವರ– ಎಚ್ಚರಿಕೆ ಅಗತ್ಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಕೇರಳ –ತಮಿಳುನಾಡು ಗಡಿಯಲ್ಲಿರುವ ವಾಳಯಾರ್ ನಲ್ಲಿ 5 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಅಧಿಕ ಮಕ್ಕಳಲ್ಲಿ ಟೊಮೇಟೋ ಜ್ವರ ಕಂಡು ಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಈ ರೋಗ ಲಕ್ಷಣ ಪತ್ತೆಯಾಗಿರುವುದಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಈ ಜ್ವರವು ಪತ್ತೆಯಾದ ಕಾರಣ ಗಡಿಭಾಗದ ಜಿಲ್ಲೆಗಳು ಈ ಕುರಿತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಜ್ವರ ಕಾಣಿಸಿಕೊಳ್ಳುವ ಮಕ್ಕಳ ದೇಹದಲ್ಲಿ ಟೊಮೇಟೋ ಆಕಾರದ ಗುಳ್ಳೆಗಳು ಏಳುವುದರಿಂದ ಇದಕ್ಕೆ ಟೊಮೇಟೋ ಜ್ವರ ಎಂದು ಹೆಸರಿಡಲಾಗಿದ್ದು, ಈ ಜ್ವರವು ವೈರಸ್‌ನಿಂದ ಹರಡುತ್ತಿದ್ದು, ಈ ಜ್ವರಕ್ಕೂ, ಕೊರೋನಾ ಗೂ ಯಾವುದೇ ಸಂಬಂಧವಿರುವುದಿಲ್ಲ.

ಈ ಜ್ವರವು ಚಿಕೂನ್‌ಗೂನ್ಯ ಲಕ್ಷಣವನ್ನು ಹೋಲುತ್ತಿದ್ದು, ಜ್ವರ ಹಾಗೂ ಗುಳ್ಳೆಯ ಜೊತೆಗೆ ಕೆಮ್ಮು, ಶೀತ, ನಿರ್ಜಲೀಕರಣ ಉಂಟಾಗುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಸೋಂಕಿತ ಮಕ್ಕಳು ಕ್ವಾರಂಟೈನ್ ಆಗಬೇಕು ಹಾಗೂ ಗುಳ್ಳೆಗಳನ್ನು ಉಜ್ಜಬಾರದು.

ಜಿಲ್ಲೆಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಮೇಲ್ಕಂಡ ಲಕ್ಷಣಗಳಿರುವ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇರಳದಿಂದ ಬರುವ ವ್ಯಕ್ತಿಗಳು, ಯಾತ್ರಿಕರು, ಮಕ್ಕಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ಕೊಲ್ಲೂರು ಮೂಕಾಂಬಿಕಾ ಹಾಗೂ ಜಿಲ್ಲೆಯ ಇತರೆ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಲ್ಲಿಯೂ ಕೂಡ ಈ ರೋಗ ಲಕ್ಷಣ ಹೊಂದಿರುವ ಪ್ರಕರಣಗಳ ಕುರಿತು ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ಎಲ್ಲಾ ಮಕ್ಕಳ ತಜ್ಞರು ಈ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ ನಡೆಸಿ, ಮಾಹಿತಿ ನೀಡಬೇಕು.

ಸಾರ್ವಜನಿಕರು ಭೀತಿಗೊಳಗಾಗದೇ ಟೊಮೇಟೋ ಜ್ವರದ ಲಕ್ಷಣಗಳ ಬಗ್ಗೆ ಅರಿತು, ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನಿರ್ಜಲೀಕರಣವಾಗದಂತೆ ಹೆಚ್ಚಿನ ಗಮನ ಹರಿಸಿ, ಶುದ್ಧ ನೀರು ಸೇವಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.