2,000 ರೂ ಮುಖಬೆಲೆಯ ಕರೆನ್ಸಿ ನೋಟು ಹಿಂದಿರುಗಿಸಲು/ಬದಲಾಯಿಸಲು ಇಂದು ಕೊನೆ ದಿನ

ನವದೆಹಲಿ: 2,000 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹಿಂದಿರುಗಿಸಲು ಅಥವಾ ಬದಲಾಯಿಸಲು ಇಂದು ಕೊನೆಯ ದಿನಾಂಕವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಅಕ್ಟೋಬರ್ 1 ರಿಂದ ಬ್ಯಾಂಕ್ ನೋಟು ತನ್ನ ಮೌಲ್ಯವನ್ನು ಹೊಂದುವುದನ್ನು ನಿಲ್ಲಿಸುತ್ತದೆ ಮತ್ತು ಅದು ಕೇವಲ ಒಂದು ಕಾಗದದ ತುಂಡಾಗಿರುತ್ತದೆ. 2,000 ರೂ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಲಾಗುವುದು ಎಂದು ಕೇಂದ್ರ ಬ್ಯಾಂಕ್ ಘೋಷಿಸಿದ ನಾಲ್ಕು ತಿಂಗಳ ನಂತರ ಇದು ಬಂದಿದೆ.

ವರದಿಯ ಪ್ರಕಾರ, ಸೆಪ್ಟೆಂಬರ್ 30 ರ ಗಡುವಿನ ನಂತರವೂ 2000 ರೂ. ಕರೆನ್ಸಿ ನೋಟು ಕಾನೂನುಬದ್ಧವಾಗಿ ಉಳಿಯುತ್ತದೆ, ಅವುಗಳನ್ನು ವಹಿವಾಟುಗಳಿಗೆ ಸ್ವೀಕರಿಸಲಾಗುವುದಿಲ್ಲ. ಗಡುವಿನ ನಂತರ, ನೋಟುಗಳನ್ನು RBI ನೊಂದಿಗೆ ಮಾತ್ರ ವಿನಿಮಯ ಮಾಡಿಕೊಳ್ಳಬಹುದು.

ಸೆಪ್ಟೆಂಬರ್ 30 ರವರೆಗೆ, 2,000 ರೂ. ಕರೆನ್ಸಿ ನೋಟುಗಳನ್ನು ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳು ಅಥವಾ ಯಾವುದೇ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಒಂದು ಬಾರಿಗೆ 20,000ರೂ. ಮಿತಿವರೆಗೆ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾಮಾಡಬಹುದು ಅಥವಾ ಬದಲಾಯಿಸಿಕೊಳ್ಳಬಹುದು. RBI ಶಾಖೆಗಳಲ್ಲಿ ರಿಕ್ವೆಸ್ಟ್ ಸ್ಲಿಪ್ ಬಳಸಿ ವೈಯಕ್ತಿಕ ಮಾಹಿತಿ ಮತ್ತು ವಿವರಗಳನ್ನು ತುಂಬಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಮೇ ತಿಂಗಳಿನಿಂದ ಸುಮಾರು 93 ಪ್ರತಿಶತದಷ್ಟು ಕರೆನ್ಸಿ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಿಸಲಾಗಿದೆ ಎಂದು RBI ಹೇಳಿದೆ. ಬ್ಯಾಂಕ್‌ಗಳಿಂದ ಪಡೆದ ಮಾಹಿತಿಯ ಪ್ರಕಾರ, ಆಗಸ್ಟ್ 31, 2023 ರವರೆಗೆ ಚಲಾವಣೆಯಿಂದ ಮರಳಿ ಪಡೆದ 2,000 ರೂ ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.