ರೇಷನ್ ಕಾರ್ಡ್‌ದಾರರಿಗೆ ಇಂದೇ ಕೊನೆಯ ಗಡುವು: ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಆತಂಕ!

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ಇಂದು (ನವೆಂಬರ್ 10) ಕೊನೆಯ ದಿನವಾಗಿದೆ. ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮತ್ತೊಮ್ಮೆ ನವೆಂಬರ್ 10ರವರೆಗೆ ಅಂತಿಮ ಅವಕಾಶ ನೀಡಿತ್ತು. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ.

ನವೆಂಬರ್ 4ರಂದು ಆಹಾರ ಇಲಾಖೆಯು ಇ-ಕೆವೈಸಿ ಪ್ರಕ್ರಿಯೆಗೆ ನೀಡಿದ್ದ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಿತ್ತು. ಈ ಹಿಂದೆ ನಿಗದಿಪಡಿಸಿದ್ದ ಅವಧಿಯೊಳಗೆ ಲಕ್ಷಾಂತರ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸದ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾಲಾವಕಾಶ ಕಲ್ಪಿಸಲಾಗಿತ್ತು.

ರಾಜ್ಯದಲ್ಲಿ ಒಟ್ಟು 2.67 ಕೋಟಿ ಪಡಿತರ ಚೀಟಿದಾರರಿದ್ದು, ಸುಮಾರು 40 ಲಕ್ಷ ಮಂದಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ಇದಕ್ಕಾಗಿ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಸಿಕೊಳ್ಳಲು ಆಹಾರ ಇಲಾಖೆ ವ್ಯವಸ್ಥೆ ಕಲ್ಪಿಸಿತ್ತು.

ಇದೀಗ ಅಂತಿಮ ಗಡುವು ಮುಕ್ತಾಯದ ಹಂತಕ್ಕೆ ಬಂದಿದ್ದು, ಮತ್ತೆ ಕಾಲಾವಕಾಶ ವಿಸ್ತರಿಸುವುದಿಲ್ಲ ಎಂದು ಆಹಾರ ಸಚಿವರು ಈ ಹಿಂದೆ ಸ್ಪಷ್ಟಪಡಿಸಿದ್ದರು.

39.20 ಲಕ್ಷ ಪಡಿತರ ಚೀಟಿದಾರರಿಗೆ ಸಂಕಷ್ಟದ ಸಾಧ್ಯತೆ!

ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಇನ್ನೂ 39.20 ಲಕ್ಷ ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಇಂದೇ ಕೊನೆಯ ದಿನವಾಗಿರುವುದರಿಂದ ಈ ಪ್ರಕ್ರಿಯೆ ಪೂರ್ಣಗೊಳಿಸದವರ ಪಡಿತರ ಚೀಟಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಹೀಗಾಗಿ, ಇನ್ನೂ ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರು ತಕ್ಷಣವೇ ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸಕಾಲದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಪಡಿತರ ಸೌಲಭ್ಯದಲ್ಲಿ ವ್ಯತ್ಯಯವಾಗುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ.