ಕೊಯಮತ್ತೂರು ಸ್ಫೋಟ: ಆತ್ಮಹತ್ಯಾ ದಾಳಿ ಎಂದು ಒಪ್ಪಿಕೊಳ್ಳಿ ಎಂದ ಅಣ್ಣಾಮಲೈ; ಯುಎಪಿಎ ಹೇರಿದ ಪೊಲೀಸರು

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಭಾನುವಾರ ಮುಂಜಾನೆ ವಾಹನದಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಾಗ ವ್ಯಕ್ತಿಯೊಬ್ಬನ ಸಾವಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಒಂದು ದಿನದ ನಂತರ, ಐವರು ಆರೋಪಿಗಳ ವಿರುದ್ಧ ಮಂಗಳವಾರ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಹೇರಲಾಗಿದೆ ಎಂದು ಕೊಯಮತ್ತೂರು ನಗರ ಪೊಲೀಸ್ ಕಮಿಷನರ್ ವಿ ಬಾಲಕೃಷ್ಣನ್ ಹೇಳಿದ್ದಾರೆ.

ಕೊಯಮತ್ತೂರು ಪೊಲೀಸರು ಬಂಧಿತ ಆರೋಪಿಗಳನ್ನು ಜಿಎಂ ನಗರದ ಮೊಹಮ್ಮದ್ ಧಾಲ್ಹಾ (25), ಮೊಹಮ್ಮದ್ ಅಜರುದ್ದೀನ್ (25), ಮೊಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27), ಮತ್ತು ಮೊಹಮ್ಮದ್ ನವಾಜ್ ಇಸ್ಮಾಯಿಲ್ (27) ಎಂದು ಗುರುತಿಸಿದ್ದಾರೆ. ಈ ಎಲ್ಲರೂ ಕೊಯಮತ್ತೂರು ಜಿಲ್ಲೆಯವರು.

ಸ್ಫೋಟದ ಕುರಿತು ತಮಿಳುನಾಡು ಭಾರತೀಯ ಜನತಾ ಪಾರ್ಟಿ ಮುಖ್ಯಸ್ಥ ಅಣ್ಣಾಮಲೈ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಪೊಲೀಸರು ಇದನ್ನು ಆತ್ಮಹತ್ಯಾ ದಾಳಿ ಎಂದು ಒಪ್ಪಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿರುವಾಗ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, “ಅಕ್ಟೋಬರ್ 21 ರಂದು ಜಮೇಶಾ ಮುಬಿನ್ ಅವರು ಐಸಿಸ್‌ನಂತೆಯೇ ವಾಟ್ಸಾಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಐವರು ಜನರನ್ನು ಏಕೆ ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿಲ್ಲ. ಈ ಸ್ಫೋಟದ ಬಗ್ಗೆ ತಮಿಳುನಾಡು ಬಿಜೆಪಿ ಪರವಾಗಿ ನಾವು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ಪೊಲೀಸರು ಇದನ್ನು ಆತ್ಮಹತ್ಯಾ ದಾಳಿ ಎಂದು ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜಮೇಶಾ ಮುಬಿನ್ ಅವರ ನಿವಾಸದಿಂದ ಪೊಲೀಸರು 50 ಕೆಜಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್, ಸೋಡಿಯಂ, ಫ್ಯೂಸ್ ವೈರ್ ಮತ್ತು 7 ವೋಲ್ಟ್ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಇದನ್ನು ಬಹಿರಂಗಪಡಿಸಿಲ್ಲ ಎಂದು ಅಣ್ಣಾಮಲೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಮೇಶ ಮುಬಿನ್ ಅವರ ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಅವರು ಪ್ಲಾಸ್ಟಿಕ್‌ನಲ್ಲಿ ಸುತ್ತಿರುವ ಭಾರವಾದ ವಸ್ತುವನ್ನು ಸಾಗಿಸುತ್ತಿರುವುದು ಸೆರೆಯಾಗಿದೆ. ಭಾನುವಾರ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ ಜಮೇಶಾ ಮುಬಿನ್ ಬಲಿಯಾಗಿದ್ದಾರೆ. ಅವರು ಕಾರನ್ನು ಚಲಾಯಿಸುತ್ತಿದ್ದರು ಮತ್ತು ಚೆಕ್ಪಾಯಿಂಟ್ ಅನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಕಾರನ್ನು ಬಿಟ್ಟೋಡಲು ಯತ್ನಿಸುತ್ತಿದ್ದಾಗ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಅವರ ಗುರಿ ಏನೆಂಬುದರ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.